

ಮೇಷ: ಈ ವರ್ಷವು ನಿಮಗೆ ಹರ್ಷದಾಯಕವಾಗಿರುತ್ತದೆ. ಲಾಭಕ್ಕೆ ಬರುವ ಗುರು ದಶಮಶನಿ ಸೇರಿಕೊಂಡು ಎಲ್ಲಾ ವಿಷಯಗಳಲ್ಲಿ ನಿಮ್ಮನ್ನು ಜಯಶೀಲರನ್ನಾಗಿ ಮಾಡಿಸುತ್ತಾರೆ. ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ. ಒಂದೇ ಸಮಯದಲ್ಲಿ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸುವ ನಿಮ್ಮ ಕೌಶಲದಿಂದಾಗಿ ಸಮಾಜದಲ್ಲಿ ಗೌರವಾದರಗಳು ದೊರೆಯುತ್ತವೆ. ದಾನ-ಧರ್ಮ, ಸಮಾಜಮುಖಿ ಕಾರ್ಯಗಳಲ್ಲಿ ಬಹುವಾಗಿ ತೊಡಗಿಸಿಕೊಳ್ಳಿ. ಅನಾಯಾಸವಾಗಿ ಹಾಗೂ ಅನಿರೀಕ್ಷಿತವಾಗಿ ಧನಲಾಭ ಯೋಗವನ್ನು ಮೊದಲ ಆರು ತಿಂಗಳುಗಳಲ್ಲಿ ಅನುಭವಿಸಬಹುದು. ವರ್ಷದ ಕೊನೆಯ ತಿಂಗಳುಗಳಲ್ಲಿ ಮಾತ್ರ ಹುಷಾರಾಗಿರಿ. ಏಕೆಂದರೆ ವಾಹನ ಅಪಘಾತ, ಶತ್ರುಪೀಡೆ, ಧನಹಾನಿ, ಮಾನಸಿಕ ಕಿರಿಕಿರಿ ಉಂಟಾಗುವ ಸಾಧ್ಯತೆ ಇರುವುದರಿಂದ ಜಾಗ್ರತೆ ಬೇಕೇ ಬೇಕು. ಇಷ್ಟದೇವರನ್ನು ಕುಲದೇವರನ್ನು ನಿರ್ಮಲಚಿತ್ತದಿಂದ ಆರಾಧಿಸಿ.
ವೃಷಭ: ಈ ವರ್ಷ ನಿಮಗೆ ಮಿಶ್ರ ಫಲದಾಯಕವಾಗಿದ್ದರೂ ಸ್ವಲ್ಪ ಮಟ್ಟಿಗೆ ಶುಭಫಲಗಳು ಜಾಸ್ತಿ ಅನುಭವಕ್ಕೆ ಬರಲಿದೆ. ಉದ್ಯೋಗದಲ್ಲಿ ಮುಂಬಡ್ತಿ ಇದ್ದು ದೊಡ್ಡ ಜವಾಬ್ದಾರಿ ಹೊರಲು ತಯಾರಾಗಿರಿ. ಕುಟುಂಬದ ಪ್ರಮುಖ ವ್ಯಕ್ತಿಯ ವಿಯೋಗ ಸಾಧ್ಯತೆ. ಹಲವು ಭೂ ನಿವೇಶನಗಳ ಖರೀದಿ ಯೋಗವಿದೆ. ಯೋಗ, ಅಧ್ಯಾತ್ಮದಲ್ಲಿ ತೊಡಗಿಸಿಕೊಂಡು ನೆಮ್ಮದಿ ಪಡೆಯಿರಿ. ಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಸ್ವಲ್ಪ ಹಿನ್ನಡೆ ಇದೆ. ಮಾರ್ಚ್ ತಿಂಗಳಲ್ಲಿ ವಾಹನ ಅಪಘಾತ ಅಥವಾ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಕೊನೆಯ ಮೂರು ತಿಂಗಳುಗಳಲ್ಲಿ ಆರ್ಥಿಕ ವಂಚನೆಗೆ ಒಳಗಾಗುವ ಸಾಧ್ಯತೆಯೂ ಇದೆ. ಲಗ್ನದ ರಾಹುವಿನಿಂದಾಗಿ ಅನಾರೋಗ್ಯ ಪ್ರಬಲವಾಗಿ ಕಾಡಬಹುದು. ಮಹಾಲಕ್ಷ್ಮಿ ಅಷ್ಟಕವನ್ನು ನಿರಂತರವಾಗಿ ಪಠಿಸಿ.
ಮಿಥುನ: ಈ ವರ್ಷ ನಿಮಗೆ ಸುಖ-ದುಃಖ, ಲಾಭ-ನಷ್ಟ, ಸೋಲು-ಗೆಲುವು... ಹೀಗೆ ಮಿಶ್ರಫಲದಾಯಕವಾಗಲಿದೆ. ಅಷ್ಟಮ ಶನಿಯ ಪ್ರಭಾವ ಎಂದಿನಂತೆ ಮುಂದುವರಿಯಲಿದೆ. ವ್ಯಾಪಾರ ವ್ಯವಹಾರ ಉದ್ಯೋಗದಲ್ಲಿ ಅತಂತ್ರತೆ ಕಾಡಬಹುದು. ಹಿತೈಷಿಗಳೇ ಶತ್ರುಗಳಾಗಬಹುದು. ಕೊನೆಯ ಮಧ್ಯಭಾಗದಲ್ಲಿ ಆರ್ಥಿಕ ಮುಗ್ಗಟ್ಟು ಕಾಡಲಿದೆ. ಮೇ-ಜೂನ್ ಮಾಸಗಳು ಅತ್ಯಂತ ಕಷ್ಟದಾಯಕವಾಗಿರುತ್ತವೆ. ನವಮದ ಗುರು ಮುಳುಗುವವನಿಗೆ ಹುಲ್ಲು ಆಸರೆ ಆಗುವಂತೆ ಕೈ ಹಿಡಿಯಲಿದ್ದಾನೆ. ಧಾರ್ವಿುಕ ಕಾರ್ಯಗಳನ್ನು ಮಾಡಿ. ಹಿರಿಯರ ನಿರಂತರ ಬೆಂಬಲ ದೊರೆಯಲಿದೆ. ಮಕ್ಕಳ ವಿದ್ಯಾಭ್ಯಾಸ, ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದು, ಸ್ವಲ್ಪಮಟ್ಟಿಗೆ ಒಳ್ಳೆ ಫಲಗಳು ಇದ್ದೇ ಇವೆ. ಶನೇಶ್ಚರ ಮತ್ತು ಲಕ್ಷ್ಮೀನಾರಾಯಣರನ್ನು ಆರಾಧಿಸಿ.
ಕಟಕ: ವರ್ಷದ ಆದಿಭಾಗದಲ್ಲಿ ಕಷ್ಟಗಳೇ ಹೆಚ್ಚು ಅನುಭವಕ್ಕೆ ಬರಲಿವೆ. ಅಷ್ಟಮದ ಗುರು ಮತ್ತು ಸಪ್ತಮದ ಶನಿ ಕೌಟುಂಬಿಕ ಸಮಸ್ಯೆಗಳನ್ನು ತಂದೊಡ್ಡಲಿದ್ದಾರೆ. ಆರ್ಥಿಕ, ಮಾನಸಿಕ, ಕೌಟುಂಬಿಕ ಹೀಗೆ ಮೂರು ವಿಭಾಗಗಳಲ್ಲಿ ನಿರಂತರವಾಗಿ ಸಮಸ್ಯೆಗಳು ಎದುರಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ನಿರೀಕ್ಷಿತವಾಗಿರುವುದರಿಂದ ಅದನ್ನು ನಿಭಾಯಿಸಲು ಮಾನಸಿಕವಾಗಿ ಸಿದ್ಧರಾಗಿ. ಅಜ್ಞಾತರೋಗದಿಂದ ಹಲವು ಯೋಜನೆಗಳನ್ನು ಕೈಬಿಡಬೇಕಾದ ಸಂದರ್ಭ ಎದುರಾಗಬಹುದು. ಅವಿವಾಹಿತರಿಗೆ ವಿವಾಹದ ನಿರೀಕ್ಷೆ ಫಲಿಸಲಿದ್ದು ಯೋಗ್ಯ ಸಂಗಾತಿಯೊಂದಿಗೆ ಚತುರ್ಭಜರಾಗಬಹುದು. ವಿವಾಹಿತರಿಗೆ ಸಾಂಸಾರಿಕ ಕಷ್ಟಗಳು ಕಾಡಲಿವೆ. ಸಹನೆ, ಸಮಾಧಾನದಿಂದ ನಿಭಾಯಿಸಿ. ವರ್ಷಾಂತ್ಯದಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಚಾಮುಂಡೇಶ್ವರಿಯನ್ನು ಅನನ್ಯ ಭಾವದಿಂದ ಆರಾಧಿಸಿ. ಕಷ್ಟಗಳು ಕಡಿಮೆಯಾಗುವವು.
ಸಿಂಹ: ಈ ಸಂವತ್ಸರವು ನಿಮಗೆ ಎಲ್ಲಾ ರೀತಿಯಲ್ಲಿ ಶುಭ ಫಲಪ್ರದವಾಗಿದೆ. ಶತ್ರುಗಳನ್ನು ನಿಗ್ರಹಿಸಿ ವಿಜಯದ ನಗೆ ಬೀರಲಿದ್ದೀರಿ. ಬಹುಕಾಲದಿಂದ ನಡೆಯುತ್ತಿದ್ದ ವಿವಾದ ಈ ವರ್ಷ ಸುಖಾಂತ್ಯವಾಗಲಿದ್ದು ನೆಮ್ಮದಿ ನಿಮ್ಮದಾಗಲಿದೆ. ಪುತ್ರ ಸಂತಾನಭಾಗ್ಯ ಪ್ರಾಪ್ತಿಯಾಗಲಿದ್ದು ಜೀವನದ ಖುಷಿಯನ್ನು ಹೆಚ್ಚಿಸಲಿದೆ. ಸ್ನಾಯುಗಳಿಗೆ ಮತ್ತು ರಕ್ತಕ್ಕೆ ಸಂಬಂಧಪಟ್ಟ ರೋಗ ಬಾಧಿಸಬಹುದು. ಎಚ್ಚರದಿಂದಿರಿ. ವೈದ್ಯರ ಸಲಹೆಯನ್ನು ಚಾಚೂತಪ್ಪದೆ ಪಾಲಿಸಿ. ವಿದೇಶ ಪ್ರಯಾಣ ಯೋಗವಿದೆ. ವರ್ಷದ ಮಧ್ಯಭಾಗದಲ್ಲಿ ಹಣದ ಅಪವ್ಯಯ ಆಗಬಹುದು, ಎಚ್ಚರಿಕೆಯಿಂದಿರಿ. ಹಿರಿಯರ ಆಶೀರ್ವಾದದ ಶ್ರೀರಕ್ಷೆ ನಿಮ್ಮ ಪಾಲಿಗಿದೆ. ಕುಬೇರ ಲಕ್ಷ್ಮಿಯನ್ನು ವಿಶೇಷವಾಗಿ ಆರಾಧಿಸಿ.
ಕನ್ಯಾ: ಈ ವರ್ಷ ಪ್ರಾಯಶಃ ನಿಮ್ಮಷ್ಟು ಸಮಸ್ಯೆಗಳು ಇನ್ನಾರಿಗೂ ಇರಲಿಕ್ಕಿಲ್ಲ. ಪಂಚಮದ ಶನಿ ಆರರ ಗುರು ಸೇರಿಕೊಂಡು ನಿಮ್ಮ ಜೀವನವನ್ನು ಗೊಂದಲದ ಗೂಡಾಗಿಸಲಿದ್ದಾರೆ. ಮಕ್ಕಳ ವಿಚಾರದಲ್ಲಿ ನಿರಂತರ ಅಸಮಾಧಾನ, ವ್ಯಾಪಾರದಲ್ಲಿ ಹಿನ್ನಡೆ, ನಿರಂತರ ಅಪವ್ಯಯ, ಕುಟುಂಬದಲ್ಲಿ ಅಶಾಂತಿ, ಸಾಲಸೋಲ, ವಂಚನಾ ಭೀತಿ ಎಲ್ಲವೂ ಬಾಧಿಸಲಿದೆ. ಧೃತಿಗೆಡಬೇಡಿ. ರಾತ್ರಿ ಮುಗಿದ ಮೇಲೆ ಹಗಲು ಬಂದೇ ಬರುತ್ತದೆ. ವರ್ಷದ ಮೊದಲ ಮೂರು ಮಾಸಗಳು ನಿಮಗೆ ಪ್ರತಿಕೂಲವಾಗಿದ್ದ್ದು ಸರಿಯಾದ ಪರಿಹಾರವನ್ನು ಮಾಡಿಕೊಳ್ಳಿ. ಬಂಧು-ಮಿತ್ರರೊಂದಿಗೆ ವಿರೋಧ, ಸಹೋದ್ಯೋಗಿಗಳೊಂದಿಗೆ ಅಸಹನೆಯಿಂದ ಹಲವು ಸಮಸ್ಯೆಗಳು ಕಾಡಲಿವೆ. ಕೋರ್ಟು ವ್ಯವಹಾರಗಳಲ್ಲಿ ಅಪಜಯ ಆಗಬಹುದು. ಶನೇಶ್ಚರನನ್ನು, ಕಾಲಭೈರವನನ್ನು ಆರಾಧಿಸಿ. ದೇವರು ಕೈಬಿಡುವುದಿಲ್ಲ.
ತುಲಾ: ಈ ವರ್ಷವು ನಿಮಗೆ ಲಾಭವನ್ನೂ ಕೊಡುತ್ತದೆ, ನಷ್ಟವನ್ನೂ ನೀಡುತ್ತದೆ. ಜಯವೂ ಇದೆ, ಅಪಜಯವೂ ಇದೆ. ಸುಖ-ದುಃಖಗಳ ಮಿಶ್ರಫಲವೇ ವರ್ಷದುದ್ದಕ್ಕೂ ನಿಮ್ಮ ಪಾಲಿಗಿದೆ. ಪಂಚಮದ ಗುರುವಿನ ಶುಭಫಲ ದೊರೆಯಬೇಕಾಗಿತ್ತು. ಆದರೆ ನಾಲ್ಕರ ಶನಿಯ ಪ್ರತಿರೋಧ ಅದಕ್ಕೆ ಅವಕಾಶ ಕೊಡದೇ ಕಾಡಲಿದೆ. ಮಕ್ಕಳ ವಿದ್ಯಾಭ್ಯಾಸ, ಉದ್ಯೋಗದಲ್ಲಿ ಅತಿಶಯವಾದ ಪ್ರಗತಿ, ಅದರಿಂದ ಮಾನಸಿಕ ಸಮಾಧಾನ ಕಾಣಲಿದ್ದೀರಿ. ಆದರೆ ಉಳಿದಂತೆ ಮಾನಸಿಕ ನೆಮ್ಮದಿ ಮರೀಚಿಕೆ ಆಗಲಿದೆ. ಸಿದ್ಧಿಯ ದಾರಿಯಲ್ಲಿ ಚಡಪಡಿಕೆ ಅಡ್ಡಿಯಾಗಬಹುದು. ಮನೆಯಲ್ಲಿ ಕಿರಿಕಿರಿ, ಹೊರಗೆ ನೆಮ್ಮದಿಯ ವಾತಾವರಣ. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ಉದರ ಸಂಬಂಧಿ ಬೇನೆಗಳು ಕಾಡಬಹುದು. ದತ್ತಾತ್ರೇಯ ಸ್ವಾಮಿಯನ್ನು ಭಕ್ತಿಯಿಂದ ಆರಾಧಿಸಿ.
ವೃಶ್ಚಿಕ: ಈ ವರ್ಷ ನಿಮಗೆ ಎಲ್ಲಾ ರೀತಿಯಲ್ಲೂ ಆಶಾದಾಯಕವಾಗಿದೆ. ಸುಖದ ಗುರು, ತೃತೀಯದ ಶನಿಯಿಂದ ಮನೆಯಲ್ಲಿ ಸದಾ ನೆಮ್ಮದಿಯ ವಾತಾವರಣ ಇರಲಿದೆ. ಆರಂಭದಲ್ಲಿ ನೂತನ ಗೃಹಾರಂಭಕ್ಕಾಗಿ, ನಿವೇಶನ ಖರೀದಿಸುವ ಯೋಗವಿದೆ. ಕೃಷಿಭೂಮಿಗೆ ಸಂಬಂಧಿಸಿ ಸಹೋದರರೊಂದಿಗೆ ಕಲಹ ಸಾಧ್ಯತೆ. ಜಾಣತನದಿಂದ ವರ್ತಿಸಿ. ಸಮಾಧಾನ ಚಿತ್ತ ನಿಮ್ಮದಾಗಿರಲಿ. ವರ್ಷದ ಮಧ್ಯಭಾಗದಲ್ಲಿ ಅಪಪ್ರಚಾರ, ಅವಮಾನಗಳಂಥ ಘಟನೆಗಳು ನಡೆಯಬಹುದು. ನೀವು ಪರಿಶುದ್ಧರಾಗಿದ್ದರೆ ಅವುಗಳ ಬಗೆಗೆ ತೀರ ತಲೆಕೆಡಿಸಿಕೊಳ್ಳಬೇಕಾಗುವುದಿಲ್ಲ. ಕೊನೆಯ ತಿಂಗಳುಗಳಲ್ಲಿ ಆರ್ಥಿಕವಾದ ಹೂಡಿಕೆಗೆ ಉತ್ತಮ ಅವಕಾಶಗಳು ಕೂಡಿ ಬರಲಿವೆ. ಗುರುಹಿರಿಯರ ಆಶೀರ್ವಾದ ನಿಮಗೆ ಶ್ರೀರಕ್ಷೆಯಾಗಲಿದೆ. ಶ್ರೀ ಮಂಜುನಾಥನನ್ನು ಅನನ್ಯ ಭಾವದಿಂದ ಆರಾಧಿಸಿ, ಇನ್ನಷ್ಟು ಉತ್ತಮ ಫಲಗಳನ್ನು ಪಡೆಯಿರಿ.
ಧನು: ಸಾಡೇಸಾತಿಯ ಅಂತಿಮ ಹಂತದಲ್ಲಿ ಇರುವುದರಿಂದ, ಮಾತ್ರವಲ್ಲದೆ ಗುರುವು ಕೂಡ ಪ್ರತಿಕೂಲನಾಗಿರುವುದರಿಂದ ಜೀವನದಲ್ಲಿ ಎಚ್ಚರಿಕೆಯಿಂದ ಇರುವುದು ಅನಿವಾರ್ಯ. ಸ್ಥಾನಪಲ್ಲಟ ಮತ್ತು ಹಿಂಬಡ್ತಿ ಸಾಧ್ಯತೆ ಇದೆ. ಆರ್ಥಿಕ ಸಂಕಷ್ಟಗಳು ತಲೆದೋರಬಹುದು. ಕುಟುಂಬದಲ್ಲಿ ಮನಸ್ತಾಪ ಉಂಟಾದೀತು. ಭೂಮಿಗೆ ಸಂಬಂಧಿಸಿ ವಾದ - ಕಲಹ ನಿಮ್ಮ ಅಶಾಂತಿಗೆ ಕಾರಣ ಆಗಬಹುದು. ಕೊನೆಯ ಮೂರು ತಿಂಗಳುಗಳು ನಿಮಗೆ ಪ್ರತಿಕೂಲವಾಗಿದ್ದು, ಅನಾರೋಗ್ಯ, ಶಸ್ತ್ರಚಿಕಿತ್ಸೆ. ಅಪಘಾತ, ಆರ್ಥಿಕ ವಂಚನೆಯಂತಹ ಸಮಸ್ಯೆಗಳು ತಲೆದೋರಬಹುದು. ಆದರೂ ಷಷ್ಟದ ರಾಹು ನೀಡುವ ಪುಟ್ಟ ನೆರವೇ ನಿಮ್ಮನ್ನು ಕಷ್ಟದ ನದಿಯನ್ನು ದಾಟಿಸುತ್ತದೆ. ಶತ್ರುಗಳ ಸತ್ವಸಂಹಾರ ಆಗುತ್ತದೆ. ನೀವು ಮಾತ್ರ ಶನಿಶ್ಚರನನ್ನು, ಭುವನೇಶ್ವರಿಯನ್ನು ಆರಾಧಿಸಲು ಮರೆಯಬೇಡಿ.
ಮಕರ: ಜನ್ಮಶನಿಯು ಕೊಡಬಹುದಾದ ಅತಿಶಯವಾದ ಕಷ್ಟ ಪರಂಪರೆಯ ಪ್ರವಾಹಕ್ಕೆ ದ್ವಿತೀಯದ ಗುರು ತಕ್ಕಮಟ್ಟಿಗೆ ತಡೆಯೊಡ್ಡಿ ನಿವಾರಿಸಲಿದ್ದಾನೆ. ವರ್ಷದ ಆದಿಭಾಗದಲ್ಲಿ ತೊಂದರೆಗಳು ಕಾಡಿಯೇ ಕಾಡುತ್ತವೆ. ಆದರೆ ದಿನಗಳೆದಂತೆ ಆ ಕಷ್ಟಗಳ ಪ್ರಭಾವ ಕಡಿಮೆಯಾಗಿ ಅದರ ಪರಿಣಾಮ ತಿಳಿಯಾಗುತ್ತದೆ. ಆರೋಗ್ಯದಲ್ಲಿ ಎಚ್ಚರ ಅವಶ್ಯ. ಹಲವು ರೋಗಗಳು ಬಾಧಿಸಬಹುದು. ಹಣಕಾಸಿನ ಸಮಸ್ಯೆ ತಲೆದೋರಬಹುದು. ಕುಟುಂಬದ ಬೆಂಬಲ ನಿಮಗೆ ಆಶಾಕಿರಣವಾಗಲಿದೆ. ಅನವಶ್ಯಕ ಖರ್ಚುಗಳು ತಲೆದೋರಿದರೂ ಆದಾಯ ಮೂಲಕ್ಕೆ ತೊಂದರೆ ಆಗುವುದಿಲ್ಲ. ಖಾಸಗಿ ಉದ್ಯೋಗಿಗಳಿಗೆ ಅತಂತ್ರ ಸ್ಥಿತಿ ಉಂಟಾಗಲಿದೆ. ಆ ಗೊಂದಲದಿಂದ ನಿಮ್ಮನ್ನು ಪಾರು ಮಾಡಲು ಆಂಜನೇಯನಿದ್ದಾನೆ. ಆತನನ್ನು ಶ್ರದ್ಧಾಭಕ್ತಿಯಿಂದ ಭಜಿಸಿ, ಪೂಜಿಸಿ.
ಕುಂಭ: ಈ ವರ್ಷ ನಿಮಗೆ ಮಿಶ್ರಫಲವೇ ಹೆಚ್ಚು. ಇಂದು ಗೆದ್ದಂತೆ ಕಂಡರೂ ನಾಳೆ ಸೋತಿರುತ್ತೀರಿ. ಏನು ಮಾಡಲಿ ಎಂದು ರೋದಿಸುವ ಹೊತ್ತಿಗೆ ಇನ್ನಾವುದೋ ಗೆಲುವು ಸಾಂತ್ವನ ಹೇಳುತ್ತದೆ. ರಾಹುಗ್ರಸ್ತ ದಿವಾಕರನಂತೆ ಜೀವನದಲ್ಲಿ ಬವಣೆ ಪಡುವುದು ನಿಶ್ಚಿತ. ಸಾಡೇಸಾತಿಯ ಪ್ರಭಾವದಿಂದ ಅಧಿಕಾರ ಕಳೆದುಕೊಳ್ಳಬಹುದು. ಅನವಶ್ಯಕ ಅಪವ್ಯಯವಾಗಬಹುದು. ಒಂದು ಕಾರ್ಯಕ್ಕೆ ಹತ್ತಾರುಬಾರಿ ಅಲೆದಾಡುವ ಸ್ಥಿತಿ ತಲೆದೋರಬಹುದು. ಅನಾರೋಗ್ಯ ಸಮಸ್ಯೆ ಬೇರೆ. ಪಾಪಕಾರ್ಯಗಳಲ್ಲಿ ಆಸಕ್ತಿಯಂತಹ ಕೆಟ್ಟಫಲಗಳು ಅನುಭವಕ್ಕೆ ಬರಲಿದೆ. ದೈವಾನುಗ್ರಹದಿಂದ ಹಲವು ಸಾಧನೆಗಳಲ್ಲಿ ಯಶ ಸಿಗಲಿದೆ. ವರ್ಷದ ಅಂತ್ಯದ ನಾಲ್ಕು ಮಾಸಗಳು ಅತ್ಯಂತ ಕಷ್ಟದಾಯಕ. ದೇವತಾರಾಧನೆ ಮಾಡಿ, ತೀರ್ಥಯಾತ್ರೆಗೆ ಹೋಗಿ ಬನ್ನಿ. ಶನೇಶ್ಚರನನ್ನು, ಲಕ್ಷ್ಮೀನರಸಿಂಹನನ್ನು ಆರಾಧಿಸಿ. ಕಷ್ಟಗಳು ಕರಗಿ ಸುಖದ ಕ್ಷಣಗಳು ಹೆಚ್ಚುತ್ತವೆ.
ಮೀನ: ಈ ವರ್ಷ ನಿಮ್ಮ ಪಾಲಿಗೆ ಶುಭಫಲಗಳನ್ನು ಕೊಡಲಿದೆ. 12ರ ಗುರುವಿನ ಸಮಸ್ಯೆಯನ್ನು ಲಾಭದ ಶನಿ, ತೃತೀಯದ ರಾಹು ಸೇರಿಕೊಂಡು ಪರಿಹರಿಸುತ್ತಾರೆ. ಸ್ಥಿರಸಂಪತ್ತು ಮತ್ತು ಆಸ್ತಿ ಲಾಭ ಆಗಲಿದೆ. ಮಾನಸಿಕವಾದ ದೃಢತೆ ಕಾರ್ಯಸಾಧನೆಗೆ ಸಹಕಾರಿ ಆಗಲಿದೆ. ಅನಿರೀಕ್ಷಿತ ಲಾಭ ಬರುವುದರಿಂದ ನಿಮ್ಮ ಪ್ರಯತ್ನ ಫಲಕಾರಿ ಯಾಗಲಿದೆ. ಸಹೋದರರೊಂದಿಗೆ ಕಿರಿಕಿರಿ ಉಂಟಾದೀತು. ವರ್ಷಾಂತ್ಯದಲ್ಲಿ ಹೆತ್ತವರೊಂದಿಗೆ ಮನಸ್ತಾಪ, ದಾಂಪತ್ಯದಲ್ಲಿ ಬಿರುಕು ಕಾಡಬಹುದು. ಆದರೆ ವಿವೇಚನೆ ಕಳೆದುಕೊಳ್ಳದೇ ನಿಭಾಯಿಸಿ. ಸರ್ಕಾರಿ ಕೆಲಸಗಳಲ್ಲಿ ಕಾರ್ಯಸಿದ್ಧಿಯಾಗಲಿದೆ. ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ ಉಂಟಾಗಲಿದೆ. ಕಷ್ಟ ನಿವಾರಣೆಗೆ ಸುಬ್ರಹ್ಮಣ್ಯನನ್ನು ನಿತ್ಯ ಆರಾಧಿಸಿ.