ಯತ್ನಾಳ್ ಉಚ್ಚಾಟನೆಗೆ ಪಟ್ಟು; ಅತೃಪ್ತರ ವಿರುದ್ಧ ಕಾರ್ಯಕರ್ತರ ಕಿಡಿ

Yatnal Vijayendra
Published on

ಬೆಂಗಳೂರು: ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಡಿ ಕಾಂಗ್ರೆಸ್​ಗೆ ಚುರುಕು ಮುಟ್ಟಿಸುವ ಸಿದ್ಧತೆ ನಡೆಸಬೇಕಿದ್ದ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಉಲ್ಬಣಗೊಳ್ಳುವುದಕ್ಕೆ ವರಿಷ್ಠರ ‘ಕಾದು ನೋಡುವ’ ಮನೋಸ್ಥಿತಿಯೇ ಕಾರಣ ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ದಿನಬೆಳಗಾದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಟೀಕಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ರನ್ನು ಪಕ್ಷದಿಂದಲೇ ಉಚ್ಚಾಟಿಸಬೇಕೆಂದು ಬಿಜೆಪಿ ನಿಷ್ಠರು ಪಟ್ಟುಹಿಡಿದಿದ್ದಾರೆ.

ಆರಂಭದಲ್ಲಿ ‘ಒಂಟಿ ಸಲಗ’ದಂತಿದ್ದ ಯತ್ನಾಳ್, ವೈಯಕ್ತಿಕ ದ್ವೇಷ, ಪ್ರತಿಷ್ಠೆಯಿಂದ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಟೀಕಿಸುತ್ತಿದ್ದಾರೆ ಎಂದು ಕೆಲವು ನಾಯಕರು ಭಾವಿಸಿದ್ದರು. ಹೈಕಮಾಂಡ್ ಕೂಡ ಅದೇ ಭಾವನೆಯಿಂದ ‘ತಟಸ್ಥ’ ಧೋರಣೆ ತಳೆದಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಅಸಮಾಧಾನಿತರ ಗುಂಪು ಕಟ್ಟಿಕೊಂಡು ಯತ್ನಾಳ್ ಪಕ್ಷದ ವರಿಷ್ಠರಿಗೇ ಷರತ್ತು ಹಾಕುವ ಮಟ್ಟಕ್ಕೆ ಬೆಳೆದಿರುವುದು ಕಾರ್ಯಕರ್ತರಿಂದ ಉನ್ನತ ಮಟ್ಟದ ನಾಯಕರವರೆಗೆ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ.

ವರಿಷ್ಠರಿಗೆ ಯತ್ನಾಳ್ 2 ಕಂಡೀಷನ್!: ಕೇಂದ್ರ ನಾಯಕರೊಬ್ಬರು ಯತ್ನಾಳ್​ಗೆ ಕರೆ ಮಾಡಿ, ‘ನಡ್ಡಾಜಿ ನಿಮ್ಮ ಬಗ್ಗೆ ಬೇಸರ ಮಾಡಿಕೊಂಡಿದ್ದಾರೆ. ದೆಹಲಿಗೆ ಬಂದು ಭೇಟಿಯಾಗಿ’ ಎಂದು ಸಂದೇಶ ತಲುಪಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಯತ್ನಾಳ್, ‘ನನ್ನೊಬ್ಬನನ್ನೇ ಕರೆದು ಕೂಡಿಸಿಕೊಂಡು ‘ಇತ್ನಾ ಕರ್​ದೋ ಅಚ್ಚಾ ಹೈ’ ಎಂದು ಆಸೆ-ಆಮಿಷ ತೋರಿಸಿದರೆ ಒಪ್ಪಲ್ಲ. ಇಡೀ ತಂಡಕ್ಕೆ ಭೇಟಿಗೆ ಅವಕಾಶ ನೀಡುವುದಾದರೆ ಬರುವೆ’ ಎಂಬ ಷರತ್ತು ವಿಧಿಸಿದ್ದಾರೆ. ಅದೂ ಒಮ್ಮುಖದ ಮಾತುಗಳಲ್ಲ, ಮುಖಾಮುಖಿ ಚರ್ಚೆಗೆ ಅವಕಾಶ ಕೊಡ ಬೇಕು ಎಂಬ ಎರಡನೇ ಷರತ್ತು ಸೇರಿಸಿದರು ಎನ್ನಲಾಗಿದೆ.

ಇದೇ ವೇಳೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಡಿ.3ರಂದು ಭೇಟಿಗೆ ಕಾಲಾವಕಾಶ ನೀಡಿದ್ದು, ವಕ್ಪ್ ಸಮಸ್ಯೆ ಕುರಿತು ಮಧ್ಯಂತರ ವರದಿ ಸಲ್ಲಿಸಲು ತಂಡದ ಜತೆ ದೆಹಲಿಗೆ ಬರುತ್ತಿರುವ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಂಘಟನೆಗೆ ಮುನ್ನ ಶಿಸ್ತುಕ್ರಮ ಕೈಗೊಳ್ಳಲಿ...: ಕೇಂದ್ರ ನಾಯಕರ ಸೂಚನೆಯನ್ನು ಲೆಕ್ಕಿಸಿಲ್ಲವೆಂದು ಅಭಿಯಾನ ವೇಳೆ ಯತ್ನಾಳ್ ಹೇಳಿರುವುದು ವರಿಷ್ಠರ ತಾಕತ್ತನ್ನೇ ಪ್ರಶ್ನಿಸಿದಂತಾಗಿದೆ ಎಂದು ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಮಾಜಿ ಸಚಿವರಾದ ಬಿ.ಸಿ. ಪಾಟೀಲ್, ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು, ಮಾಜಿ ಶಾಸಕರು, ಪಕ್ಷದ ಮುಖಂಡರು ಮೈಸೂರಿನಲ್ಲಿ ಶನಿವಾರ ಸಭೆ ನಡೆಸಿದ ಸಂದರ್ಭದಲ್ಲಿ, ‘ಯತ್ನಾಳ್ ಪಕ್ಷದಿಂದ ಮೊದಲು ಉಚ್ಚಾಟನೆಯಾಗಲಿ, ನಂತರ ಸಂಘಟನಾ ಪ್ರವಾಸ ಮಾಡಿ ಎಂದು ಕಾರ್ಯಕರ್ತರು ಒತ್ತಾಯಿಸಿದ ಘಟನೆ ನಡೆದಿದೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಸೇರಿ ಸಂಘದ ಕೆಲ ಪ್ರಮುಖರ ಸಮಕ್ಷಮ ಸಮನ್ವಯ ಸಭೆಯ ಬುದ್ಧಿಮಾತಿಗೂ ಅಸಮಾಧಾನಿತರು ಕಿವಿಗೊಟ್ಟಿಲ್ಲ. ಬಿ.ವೈ.ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಪಕ್ಷದ ಹೈಕಮಾಂಡ್. ಹಾಗಾಗಿ ವಿಜಯೇಂದ್ರರ ನಾಯಕತ್ವವನ್ನು ಒಪ್ಪಿಕೊಳ್ಳಲೇಬೇಕು. ಕಷ್ಟವಾದರೆ ಪಕ್ಷವನ್ನು ಬಿಟ್ಟು ಹೋಗಬೇಕು. ವಿಧಾನಸಭೆ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗುವುದಕ್ಕೆ ಯತ್ನಾಳ್ ತಂಡದವರೇ ಕಾರಣರಾಗಿದ್ದಾರೆ. ಅವರು ನಿತ್ಯವೂ ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡುತ್ತಿದ್ದಾರೆ. ಇದರಿಂದಾಗಿ ಕಾರ್ಯಕರ್ತರ ಮನಸ್ಸಿಗೆ ಬೇಸರವಾಗುತ್ತಿದೆ. ಈ ಎಲ್ಲ ಅಂಶಗಳ ಕುರಿತು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಮೈಸೂರಿನ ಸಭೆಯಲ್ಲಿ ನಿರ್ಧರಿಸಲಾಯಿತು. ಯತ್ನಾಳ್ ಅವರೊಂದಿಗೆ ಗುರುತಿಸಿಕೊಂಡಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಈ ಸಭೆಯಿಂದ ಹೊರಗಿಡಲಾಗಿತ್ತು.

ಬಿವೈವಿ ದೆಹಲಿ ಭೇಟಿ ಕುತೂಹಲ: ಯತ್ನಾಳ್ ತಂಡದ ವಿರುದ್ಧ ದೂರು ನೀಡಲೆಂದೇ ದೆಹಲಿಗೆ ಹೋಗುವುದಿಲ್ಲ. ಆದರೆ ವಿಧಾನ ಮಂಡಲ ಅಧಿವೇಶನದ ಬಳಿಕ ಕೇಂದ್ರ ನಾಯಕರಿಗೆ ಭೇಟಿಯಾಗಿ ಇತ್ತೀಚಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡುವುದಾಗಿ ಬಿ.ವೈ.ವಿಜಯೇಂದ್ರ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು. ಆದರೆ ಖಾಸಗಿ ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ದರು. ಅಲ್ಲಿಂದ ದಿಢೀರ್ ದೆಹಲಿಗೆ ತೆರಳಿದವರು ಶನಿವಾರವೇ ಬೆಂಗಳೂರಿಗೆ ಮರಳಿದ್ದು, ಯಾರನ್ನು ಭೇಟಿಯಾದರು ಗೊತ್ತಾಗಿಲ್ಲ. ಪಕ್ಷದೊಳಗಂತೂ ಕುತೂಹಲದ ಚರ್ಚೆ ಹುಟ್ಟಿ ಹಾಕಿದೆ. ಕೇಂದ್ರ ನಾಯಕರಿಗೆ ಭೇಟಿಯಾದಾಗಲೆಲ್ಲ ಯತ್ನಾಳ್ ಮತ್ತವರ ತಂಡದ ವಿರುದ್ಧ ದೂರು ನೀಡುತ್ತಾ ಹೋದರೆ ಚಾಡಿ ಹೇಳಿದಂತಾಗಲಿದೆ. ರಾಜ್ಯಾಧ್ಯಕ್ಷ ದುರ್ಬಲರೆಂಬ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ ಎಂದು ವಿಜಯೇಂದ್ರ ಅರಿತು ಈವರೆಗೆ ಎಚ್ಚರಿಕೆಯ ನಡೆಯಿಟ್ಟಿದ್ದಾರೆ.

ದೆಹಲಿಗೆ ಹೋದ ಸಂದರ್ಭದಲ್ಲಿ ವರಿಷ್ಠರ ಭೇಟಿಗೆ ಕಾಲಾವಕಾಶ ಸಿಕ್ಕಾಗ ರಾಜ್ಯದ ರಾಜಕೀಯ ವಿದ್ಯಮಾನ, ಸಂಘಟನಾತ್ಮಕ ಚಟುವಟಿಕೆ, ಸಾಧಿಸಿದ ಪ್ರಗತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಡಿಸೆಂಬರ್​ನಲ್ಲಿ ದೆಹಲಿಗೆ ಹೋಗಬೇಕೆಂದಿದ್ದವರು ನವೆಂಬರ್ ಕೊನೇ ದಿನ ದೆಹಲಿಗೆ ಹೋಗಿ ವಾಪಸ್ಸಾಗಿರುವುದು ಪಕ್ಷದ ರಾಜ್ಯ ನಾಯಕರ ಗಮನ ಸೆಳೆದಿದೆ ಎಂದು ಮೂಲಗಳು ತಿಳಿಸಿವೆ.

ಸ್ವಾರ್ಥಕ್ಕೆ ಪಕ್ಷ ಬಲಿ: ಪಕ್ಷದ ರಾಜ್ಯಾಧ್ಯಕ್ಷರ ಅನುಮತಿಯಿಲ್ಲದೆ, ಕೇಂದ್ರ ನಾಯಕತ್ವದ ಸೂಚನೆಗೂ ಕಿವಿಗೊಡದೇ ಯತ್ನಾಳ್ ಮತ್ತವರ ತಂಡ ‘ವಕ್ಪ್ ಜಾಗೃತಿ ಅಭಿಯಾನ’ ನಡೆಸಿದೆ. ಪಕ್ಷದ ರಾಜ್ಯ ನಾಯಕರನ್ನು ಒಳಗೊಂಡ ಮೂರು ತಂಡಗಳ ಜಿಲ್ಲಾವಾರು ಪ್ರವಾಸ ನಿಗದಿಯಾಗಿದ್ದು, ಈ ತಂಡಗಳಲ್ಲಿ ಅರವಿಂದ ಲಿಂಬಾವಳಿ, ಯತ್ನಾಳ್, ರಮೇಶ್ ಜಾರಕಿಹೊಳಿ ಹೆಸರುಗಳೂ ಇವೆ. ಪಕ್ಷದ ರಾಜ್ಯಾಧ್ಯಕ್ಷರ ತೀರ್ವನ, ತಂಡಗಳ ರಚನೆ ಸರಿಯಾಗಿದೆ. ಪ್ರತ್ಯೇಕ ಅಭಿಯಾನ ಬೇಡವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದ್ದರು. ಆದರೂ ಯತ್ನಾಳ್ ತಂಡವು ಅಭಿಯಾನ ನಡೆಸಿದೆ. ಈ ಯಾತ್ರೆಯುದ್ದಕ್ಕೂ ವಕ್ಪ್ ಮಂಡಳಿ ಸೃಷ್ಟಿಸಿದ ಸಮಸ್ಯೆ, ರೈತರು, ಮಠ-ಮಾನ್ಯಗಳ ಕಷ್ಟ-ನಷ್ಟ, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಚಕಾರವೆತ್ತದೆ ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಹಾಗೂ ಹೊಂದಿಕೊಂಡು ಹೋಗುವಂತೆ ಕಿವಿ ಮಾತು ಹೇಳಿದ ಮಾಜಿ ಸಿಎಂ ಡಿ.ವಿ. ಸದಾನಂದಗೌಡರ ವಿರುದ್ಧವೂ ಟೀಕಾಪ್ರಹಾರ ಮಾಡಿದ್ದಾರೆ. ಪಕ್ಷವನ್ನು ಬಲಿಕೊಟ್ಟು ಕಾಂಗ್ರೆಸ್​ಗೆ ಅನುಕೂಲ ಮಾಡಿಕೊಡಲು ಯತ್ನಾಳ್ ಈ ಯಾತ್ರೆ ನಡೆಸಿದಂತಿದೆ ಎಂಬ ಅನುಮಾನ ಬರುತ್ತಿದೆ.

ಸಂಕಷ್ಟದ ಬೇಗುದಿ: ಒಳಜಗಳವು ಬೀದಿಗೆ ಬಂದಿದ್ದರೂ ವರಿಷ್ಠರ ಮೌನ, ಕಾಲಯಾಪನೆ ತಂತ್ರ ಪಕ್ಷದ ರಾಜ್ಯ ಮುಖಂಡರು, ಕಾರ್ಯಕರ್ತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಹೊಸ್ತಿಲಲ್ಲಿ ಅತೃಪ್ತರ ಗುಂಪು ಕೇಂದ್ರ, ರಾಜ್ಯ ನಾಯಕತ್ವಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎಂದು ಅನೇಕ ಶಾಸಕರು ಒಳಗೊಳಗೆ ಕರುಬುತ್ತಿದ್ದಾರೆ. ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಟ್ಟಿ ಹಾಕಲು ಅನೇಕ ವಿಷಯಗಳಿವೆ. ವೈಫಲ್ಯಗಳನ್ನು ಜನರು ಮುಂದಿಡಲು ಉತ್ತಮ ಅವಕಾಶ ಲಭಿಸಿದೆ. ಕಾರ್ಯತಂತ್ರ, ಪೂರ್ವತಯಾರಿ ಬದಲು ಕಹಿ ಬೆಳವಣಿಗೆ ಬಗ್ಗೆ ತಲೆ ಕೆಡಿಸಿಕೊಳ್ಳುವಂತಾಗಿದೆ ಎಂದು ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ.

ಡಿಸೆಂಬರ್​ನಲ್ಲಿ ತಾರ್ಕಿಕ ಅಂತ್ಯ ?: ಹೇಳಿಕೆಗೆ ಸೀಮಿತವಾಗಿದ್ದ ಗುಂಪುಗಾರಿಕೆ ಬೀದಿಗೆ ಇಳಿದಿರುವುದು ವರಿಷ್ಠರ ಕಣ್ಣು ಕೆಂಪಾಗಿಸಿದೆ. ಈ ಮೊದಲು ಎಲ್ಲ ಮಾಹಿತಿ ತರಿಸಿಕೊಂಡಿದ್ದು, ಎಲ್ಲರ ನಡೆ-ನುಡಿಗಳ ಮೇಲೂ ಗಮನವಿಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾದ ನಂತರ ರಾಜ್ಯದತ್ತ ಹೊರಳಲಿದ್ದಾರೆ. ಕೇಂದ್ರ ನಾಯಕತ್ವ ಕಾರ್ಯಾಚರಣೆಗೆ ಇಳಿದರೆ ರಾಜಿಸೂತ್ರ ಇಲ್ಲವೇ, ಎಚ್ಚರಿಕೆಯಂತಹ ಕ್ರಮಗಳಿಗೆ ಜಾಗವಿಲ್ಲ. ಅಸಮಾಧಾನಿತರ ರಂಪಾಟಕ್ಕೆ ಡಿಸೆಂಬರ್​ನಲ್ಲಿ ರ್ತಾಕ ಅಂತ್ಯ ಕಾಣಿಸುವ ಸಾಧ್ಯತೆಗಳು ನಿಚ್ಚಳ. ದೆಹಲಿ ಮಟ್ಟದಲ್ಲಿ ಅಂತಹದೊಂದು ಚಿಂತನೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ವರಿಷ್ಠರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆ ಹಾಗೂ ಉಪ ಚುನಾವಣೆ ಬಗ್ಗೆ ವಿವರಿಸಿರುವೆ. ಪಕ್ಷ ವಿರೋಧಿ ಚಟುವಟಿಕೆಗಳಿಗೆ ಇತಿಶ್ರೀ ಹಾಡಬೇಕು ಎಂಬುದು ಕಾರ್ಯಕರ್ತರ ಬಯಕೆಯಾಗಿದೆ. ದಿನ ಬೆಳಗಾದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷರನ್ನು ಟೀಕೆ ಮಾಡುತ್ತಲೇ ಇರುವುದರಿಂದ ಕಾರ್ಯಕರ್ತರು ಬೇಸತ್ತಿದ್ದಾರೆ. 

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net