ಪರಿಸರ ರಕ್ಷಣೆಗೆ ಯಲ್ಲಪ್ಪ ರೆಡ್ಡಿ ಕಿವಿಮಾತು

CP (4)
Published on

ಬೆಂಗಳೂರು: ಪ್ರಕೃತಿ ಮೇಲೆ ಮಾನವ ನಿರಂತರ ದಾಳಿ ನಡೆಸುತ್ತಿದ್ದಾನೆ. ಇದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿ ಡಾ.ಎ.ಎನ್. ಯಲ್ಲಪ್ಪ ರೆಡ್ಡಿ, ಕಿವಿ ಮಾತು ಹೇಳಿದ್ದಾರೆ.

ಪರಿಸರ ದಿನಾಚರಣೆ ಅಂಗವಾಗಿ ನಗರ ಪೊಲೀಸ್ ಇಲಾಖೆ ಮತ್ತು ಗೋ ಗ್ರೀನ್ ರೆವೋಲ್ಯೂಷನ್ ಸಹಯೋಗದಲ್ಲಿ ನಗರ ಸಶಸ ಮೀಸಲು ಪಡೆ (ದಕ್ಷಿಣ) ಕವಾಯತು ಮೈದಾನ ಆಡುಗೋಡಿಯಲ್ಲಿ 1 ಕೋಟಿ ಮರ ನೆಡುವ ಅಭಿಯಾನಕ್ಕೆ ಯಲ್ಲಪ್ಪ ರೆಡ್ಡಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಕಳೆದ 4 ದಶಕಗಳಲ್ಲಿ ಮರಗಳ ಕಡಿತ, ನದಿ ತಿರುವು, ಡ್ಯಾಮ್‌ಗಳ ನಿರ್ಮಾಣ, ಗಣಿಗಾರಿಕೆ ಮೂಲಕ ಪ್ರಕೃತಿ ಮೇಲೆ ಮಾನವ ನಿರಂತರ ದಾಳಿ ನಡೆಸುತ್ತಿದ್ದಾನೆ.

ಇದರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ನೀರು, ಗಾಳಿ, ಮಣ್ಣನು ನಾವು ಸೃಷ್ಟಿಸಲು ಸಾಧ್ಯವಿಲ್ಲ. ಆದರೂ ಅದನ್ನು ಮಾಲಿನ್ಯ ಮಾಡಲಾಗುತ್ತಿದೆ. ಕೋವಿಡ್ ಅಂತಹ ಸಾಂಕ್ರಾಮಿಕ ರೋಗಳು ಬಂದರೂ ಮನುಷ್ಯ ಇನ್ನು ಬುದ್ಧಿ ಕಲಿಯಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾತನಾಡಿ, ಕಳೆದ 1 ವರ್ಷದಿಂದ ಪೊಲೀಸ್ ಇಲಾಖೆಯು ಹೊಸ ವರ್ಷಾಚರಣೆ, ಮಹಿಳಾ ದಿನಾಚರಣೆ ಸೇರಿದಂತೆ ಇತರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ವಿಶ್ವ ಪರಿಸರ ದಿನವನ್ನು ಗೋಗ್ರೀನ್ ಸಹ ಭಾಗಿತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ 10 ಸಾವಿರ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಗುತ್ತಿದೆ ಎಂದರು.

ಇಲಾಖೆಯಿಂದ ಯಾವುದೇ ಸೂಚನೆ ಕೊಟ್ಟರೂ ಅದರ ಪಾಲನೆ ಸರಿಯಾಗಿ ಆಗುತ್ತಿದೆ. ನಗರದ ಪೊಲೀಸ್ ಠಾಣೆಗಳಲ್ಲಿ ಸ್ಥಳಾವಕಾಶಕ್ಕೆ ತಕ್ಕಂತೆ 100 ರಿಂದ 150 ಗಿಡಗಳನ್ನು ನೆಡಲಾಗುತ್ತಿದೆ. ಬಹುಮುಖ್ಯವಾಗಿ 10 ಸಾವಿರ ಗಿಡಗಳ ಪಾಲನೆ ಪೋಷಣೆ ಮಾಡಬೇಕಾಗುತ್ತದೆ. ಈ ಗಿಡಗಳಿಗೆ ಜಿಯೋ ಟ್ಯಾಗಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಗಿಡಗಳ ಪೋಷಣೆಯಲ್ಲಿ ಪೊಲೀಸರು, ಅಧಿಕಾರಿ, ಕುಟುಂಬಸ್ಥರು ಮತ್ತು ಮಕ್ಕಳು ತೊಡಗಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net