ಯಲಹಂಕ ಘಟಕ ಲೋಕಾರ್ಪಣೆ: ಪ್ರೋತ್ಸಾಹ ವೇತನಕ್ಕೆ ನೌಕರರ ಮೊರೆ

YCCP office
Published on

ಬೆಂಗಳೂರು: ರಾಜ್ಯದ ಮೊಟ್ಟ ಮೊದಲ ಗ್ಯಾಸ್ ಹಾಗೂ ಸ್ಟೀಮ್ ಆಧಾರಿತ ಯಲಹಂಕ ಸಂಯುಕ್ತ ವಿದ್ಯುತ್ ಘಟಕ (ವೈಸಿಸಿಪಿ) ಲೋಕಾರ್ಪಣೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರೋತ್ಸಾಹಧನ ರೂಪದಲ್ಲಿ ಒಂದು ತಿಂಗಳ ವೇತನ ನೀಡಬೇಕು ಎಂದು ಕೆಪಿಸಿಎಲ್ ನೌಕರರ ಸಂಘ ಮೊರೆಯಿಟ್ಟಿದೆ.

ನಿಗಮದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಪಿಸಿಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಕೇಶವಗೌಡ ಈ ಕುರಿತು ಮನವಿ ಸಲ್ಲಿಸಿದ್ದಾರೆ. ನಿಗಮದ ವ್ಯವಸ್ಥಾಪಕ ನಿರ್ದೇಶಕರೂ ಆದ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೂ ಕೋರಿದ್ದಾರೆ.

ಹಿಂದೆಯೂ ಕೊಟ್ಟಿದ್ದರ ನೆನಪು

ರಾಜ್ಯದಲ್ಲಿಯೇ ಮೊದಲ ಬಳ್ಳಾರಿಯಲ್ಲಿ ನೂತನ ತಂತ್ರಜ್ಞಾನ ಹೊಂದಿದ 500 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ 2008ರಲ್ಲಿ ಅಧಿಕೃತ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಸಂಘದ ಮನವಿಯಂತೆ ಆಗಿನ ಸರ್ಕಾರ ನಿಗಮದ ಎಲ್ಲ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ ಪ್ರೋತ್ಸಾಹಕವಾಗಿ ೋಷಿಸಿ ಪಾವತಿಸಿದ್ದನ್ನು ಸಿಎಂ ಸಿದ್ದರಾಮಯ್ಯಗೆ ಸಂಘ ನೆನಪಿಸಿದೆ.

ಯಲಹಂಕದ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ 370 ಮೆ.ವಾ. ಸಾಮರ್ಥ್ಯದ್ದಾಗಿದೆ. ಅನಿಲ, ಹಬೆ ಬಳಸಿ ವಿದ್ಯುತ್ ಉತ್ಪಾದಿಸುವ ಮೊದಲ ಘಟಕವಾಗಿದೆ. 24ರಂದು ಲೋಕಾರ್ಪಣೆ ದಿನವೇ ನಿಗಮದ ಎಲ್ಲ ಉದ್ಯೋಗಿಗಳಿಗೆ ಒಂದು ತಿಂಗಳ ವೇತನ ಪ್ರೋತ್ಸಾಹಕವಾಗಿ ನೀಡಲು ಕೋರಿದೆ.

ಯೋಜನಾಗಾತ್ರ ದೊಡ್ಡದು ಅಥವಾ ಸಣ್ಣದು ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ. ಉನ್ನತ ತಂತ್ರಜ್ಞಾನಕ್ಕೆ ತಕ್ಕಂತೆ ನಿಗಮದ ಎಲ್ಲ ನೌಕರರು ಕೌಶಲ ರೂಢಿಸಿಕೊಂಡಿದ್ದಾರೆ. ದುಡಿಮೆ ಸಂಸ್ಕೃತಿ ಮತ್ತು ಪರಿಶ್ರಮ ಉತ್ತೇಜಿಸುವುದು ಮುಖ್ಯವಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ವೀರೇಂದ್ರ ಪ್ರತಿಪಾದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net