

ಶಿವಮೊಗ್ಗ: ಇಲ್ಲಿನ ಜನರು ಯಕ್ಷಗಾನ ಕಲೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ಯಶಸ್ಸಿಗೆ ಕಾರಣರಾದ ಶಂಭು ಹೆಗಡೆ, ಮಹಾಬಲ ಹೆಗಡೆ ಕೆರೆಮನೆ ಅವರ ಮಾರ್ಗದರ್ಶನವನ್ನು ಎಂದಿಗೂ ಮರೆಯುವುದಿಲ್ಲ ಎಂದು ಭಾಗವತ ಕಲಾವಿದ ಕೆಳಮನೆ ರಾಮರಾಯರು ಹೇಳಿದರು.
ಸಾಕೇತ ಮಿತ್ರರ ಬಳಗದಿಂದ ಸುವರ್ಣ ಸಂಸ್ಕೃತಿ ಭವನದಲ್ಲಿ ಏರ್ಪಡಿಸಿದ್ದ ಭೀಷ್ಮ ಪರ್ವ ಯಕ್ಷಗಾನ ಪ್ರದರ್ಶನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನ್ನ ಯಕ್ಷರಂಗದ ಸೇವೆಗೆ ಯಾವಾಗಲೂ ಪ್ರೇಕ್ಷಕರು, ಅದರಲ್ಲೂ ಶಿವಮೊಗ್ಗದ ಕಲಾಭಿಮಾನಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ಪ್ರಯೋಗಗಳ ಬಗ್ಗೆ ವಿಚಾರಿಸುತ್ತಾರೆ. ಸಾಂಪ್ರದಾಯಿಕವಾಗಿ ಹಿರಿಯರು ಕಲಿಸಿದ ಹಾದಿಯಲ್ಲೇ ಯಕ್ಷಗಾನ ಪರಂಪರೆ ಮುಂದುವರಿಸುತ್ತಿದ್ದೇನೆ ಎಂದರು.
ಯಕ್ಷಾಭಿಮಾನಿ ಲಕ್ಷ್ಮೀನಾರಾಯಣ ಕಾಶಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಯಕ್ಷಗಾನ ತಂಡಗಳ ನಿರ್ವಹಣೆಯೇ ಸವಾಲಾಗಿದೆ. ಅದರಲ್ಲೂ ಹವ್ಯಾಸಿಗಳೇ ಒಂದಾಗಿ ಹೆಗ್ಗೋಡು ಭಾಗದಲ್ಲಿ ಸಂಘಟನೆ ಮಾಡಿರುವುದು ಅಪರೂಪದ ಸಾಹಸ ಎಂದು ಅಭಿಪ್ರಾಯಪಟ್ಟರು.
ಪ್ರಮುಖರಾದ ಡಾ. ರತ್ನಾಕರ, ರಮಾ ಶಾಸ್ತ್ರಿ, ಬಾಬಣ್ಣ, ಟಿ.ಜೆ.ಲಕ್ಷ್ಮೀನಾರಾಯಣ, ಎನ್.ರಾಮಚಂದ್ರ, ರವೀಂದ್ರ ಐತಾಳ್, ವರದಾ ಐತಾಳ್ ಇತರರಿದ್ದರು.