

ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಬಿ.ಎಚ್.ರಸ್ತೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಜ.23ರಿಂದ 28ರವರೆಗೆ ಯಜುಃ ಸಂಹಿತಾಯಾಗ ಏರ್ಪಡಿಸಲಾಗಿದೆ ಎಂದು ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ವೆಂಕಟೇಶಮೂರ್ತಿ ತಿಳಿಸಿದರು.
23ರ ಬೆಳಗ್ಗೆ 7ಕ್ಕೆ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. 26ರ ಮಧ್ಯಾಹ್ನ 12ಕ್ಕೆ ಪಾರಾಯಣ ಕರ್ತೃಗಳಿಗೆ ಹಾಗೂ ಪಾರಾಯಣ ಮಾಡಿಸಿದ ಸೇವಾಕರ್ತೃಗಳಿಗೆ ಮತ್ತೂರಿನ ಶ್ರೀ ಅಕ್ಷರಾನಂದೇಂದ್ರ ಸರಸ್ವತೀ ಸ್ವಾಮೀಜಿ ಸಮ್ಮುಖದಲ್ಲಿ ಗೌರವಾರ್ಪಣೆ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೊಸಪೇಟೆಯ ಚಿಂತಾಮಣಿ ಮಠದ ಶ್ರೀ ಶಿವಾನಂದ ಭಾರತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ 28ರ ಬೆಳಗ್ಗೆ 11.30ಕ್ಕೆ ಯಜುಃ ಸಂಹಿತಾಯಾಗದ ಮಹಾಪೂರ್ಣಾಹುತಿ ಜರುಗಲಿದೆ. ಬಳಿಕ ಸಾಧಕರನ್ನು ಸನ್ಮಾನಿಸಲಾಗುವುದು. ಪ್ರತಿದಿನ ಮಧ್ಯಾಹ್ನ 12ಕ್ಕೆ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರುತ್ತದೆ ಎಂದರು.
ಯಜುಃ ಸಂಹಿತಾಯಾಗದ ಭಾಗವಾಗಿ ಪ್ರತಿದಿನ ಸಂಜೆ 5.30ಕ್ಕೆ ಯಾಗ ಮಂಟಪದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಸಂಜೆ 6.30ರಿಂದ 7.30ರವರೆಗೆ ಉಪನ್ಯಾಸ, ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರಲಿದೆ ಎಂದು ಹೇಳಿದರು.
23ರಂದು ಸಂಜೆ 6.30ಕ್ಕೆ ಸಂಪೆಕಟ್ಟೆ ರಾಘವೇಂದ್ರ ಘನಪಾಠಿಗಳಿಂದ ವೇದಗಳು ಮತ್ತು ಸಂಹಿತಾಯಾದ ಮಹತ್ವ, 24ರಂದು ಗಣೇಶಶಾಸ್ತ್ರಿ ಜಯಪುರ ಅವರಿಂದ ವಸಿಷ್ಠ ಋಷಿಗಳು, 25ರಂದು ರಾಜಾರಾಮ್ ಮುಂಡಿಗೇಸರ ಅವರಿಂದ ವಿಶ್ವಾಮಿತ್ರ ಮಹರ್ಷಿಗಳು, 26ರಂದು ಅಚ್ಯುತ ಅವಧಾನಿ ಅವರಿಂದ ಭಾರದ್ವಜ ಮಹರ್ಷಿಗಳು, 27ರಂದು ಹಂದಲಸು ರಾಘವೇಂದ್ರ ಭಟ್ ಅವರಿಂದ ಕಶ್ಯಪ ಮಹರ್ಷಿಗಳ ಕುರಿತ ಉಪನ್ಯಾಸವಿದೆ ಎಂದರು.
ವೇದಗಳ ಸಂರಕ್ಷಣೆ, ಮುಂದಿನ ತಲೆಮಾರಿಗೆ ಅದನ್ನು ತಲುಪಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ಸಂಘಟನೆ ಈ ಧಾರ್ಮಿಕ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಜಾಗೃತಿಗೊಳಿಸುವ ಉದ್ದೇಶದಿಂದ ಕಳೆದ 8 ವರ್ಷಗಳಿಂದ 4 ವೇದಗಳ ಸಂಹಿತಾ ಯಾಗವನ್ನು ಎರಡು ಆವೃತ್ತಿಗಳಲ್ಲಿ ಪೂರೈಸಿದ್ದು, ಪ್ರಸ್ತುತ ಮೂರನೇ ಆವೃತ್ತಿಯ ಎರಡನೇ ವರ್ಷದ ಯಜುಃ ಸಂಹಿತಾಯಾಗ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್, ಪದಾಧಿಕಾರಿಗಳಾದ ಶ್ರೀನಿವಾಸ್ ಪುರಾಣಿಕ್, ಕುಮಾರಶಾಸ್ತ್ರಿ, ಶಂಕರನಾರಾಯಣ, ಸಹನಾ ಹೆಗಡೆ, ಗಿರೀಶ್, ಡಾ.ನಾಗಮಣಿ, ಎಂ.ಎಸ್.ಸೂರ್ಯನಾರಾಯಣ ಸುದ್ದಿಗೋಷ್ಠಿಯಲ್ಲಿದ್ದರು.