ಯಾದಗಿರಿಯಲ್ಲಿ ಆಪರೇಷನ್ ಪುಣ್ಯಕೋಟಿ | ಗೋ ರಕ್ಷಣೆಗೆ ಮುಂದಾದ ನಗರಸಭೆ ಅಧಿಕಾರಿಗಳು!

cow
ಸಾಂದರ್ಭಿಕ ಚಿತ್ರ
Published on

ಯಾದಗಿರಿ: ಯಾದಗಿರಿಯಲ್ಲಿ ತಡ ರಾತ್ರಿ ನಗರಸಭೆ ಆಪರೇಷನ್ ಪುಣ್ಯಕೋಟಿ ನಡೆಸಿದೆ. ಇದರ ಫಲವಾಗಿ ರಸ್ತೆ ಮೇಲೆ ಅಡ್ಡಾಡುತ್ತಿದ್ದ ಜಾನುವಾರುಗಳು ಸುರಕ್ಷಿತವಾಗಿ ಗೋಶಾಲೆ ಸೇರಿವೆ.

ವಾಹನ ಸವಾರರಿಗೆ ಅಡ್ಡಿಯಾಗಿದ್ದ, ರಸ್ತೆ ಮೇಲೆ ಓಡಾಡ್ತಿದ್ದ ಜಾನುವಾರಗಳ ಸ್ಥಳಾಂತರ ಕಾರ್ಯವನ್ನು ನಗರಸಭೆ ನಡೆಸಿದ್ದ ಆಪರೇಷನ್ ಪುಣ್ಯಕೋಟಿಯ ನೇತೃತ್ವವನ್ನು ಪೌರಾಯುಕ್ತ ಸಂಗಪ್ಪ ಉಫಾಸೆ ವಹಿಸಿದ್ದರು. ಯಾದಗಿರಿ ನಗರದಲ್ಲಿ ದನಗಳ ಹಾವಳಿಯಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿತ್ತು ರಸ್ತೆ ಮೇಲೆ ಜಾನುವಾರುಗಳ ಓಡಾಟದಿಂದ ರಸ್ತೆ ಅಪಘಾತಗಳು ಹೆಚ್ಚಾಗಿದ್ದವು. ನಗರದ ಗಾಂಧಿ ವೃತ್ತ, ಎಪಿಎಂಸಿ ಪ್ರದೇಶ ಸೇರಿದಂತೆ ವಿವಿಧ ಪ್ರಮುಖ ರಸ್ತೆಯಲ್ಲಿಯೇ ಜಾನುವಾರುಗಳು ರಾತ್ರಿ ಕಳೆಯುತ್ತಿದ್ದವು. ಇದರಿಂದಾಗಿ ರಾತ್ರಿ ಹೊತ್ತಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತಿತ್ತು. ಕತ್ತಲಿನಲ್ಲಿ ಜಾನುವಾರುಗಳು ರಸ್ತೆ ಮೇಲೇ ಇರುತ್ತಿದ್ದರಿಂದ ವಾಹನ ಸವಾರರಿಗೂ ಪ್ರಾಣಿಗಳಿಗೂ ಅಪಾಯದ ಸಾಧ್ಯತೆ ಇತ್ತು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತ ದೃಷ್ಟಿಯಿಂದ 15 ಜಾನುವಾರುಗಳನ್ನು ರಕ್ಷಣೆ ಮಾಡಿ ಗೋಶಾಲೆಗೆ ನಗರಸಭೆ ಸ್ಥಳಾಂತರ ಮಾಡಿದೆ. ಆದರೆ ಈ ಸಂದರ್ಭ, ಅಂದರೆ ಗೋವುಗಳ ರಕ್ಷಣೆ ವೇಳೆ ಮಹಿಳೆಯೊಬ್ಬರು ಕಣ್ಣೀರು ಸುರಿಸಿದ್ದಾರೆ. ಕಾರಣವೇನು?

ಗೋರಕ್ಷಣೆ ವೇಳೆ ಮಹಿಳೆಯ ಹೈಡ್ರಾಮಾ…

ನಗರಸಭೆ ಆಪರೇಷನ್‍ ಪುಣ್ಯಕೋಟಿ ಮೂಲಕ ಹಸುಗಳನ್ನು ರಕ್ಷಿಸುತ್ತಿದ್ದಾಗ ಮಹಿಳೆಯೊಬ್ಬರು ಬಂದು, “ನಮ್ಮ ಹಸುಗಳನ್ನು ಲಾರಿಯಲ್ಲಿ ಹಾಕಿಕೊಂಡು ಹೋದರೆ ಹೇಗೆ? ನಮ್ಮ ಆಕಳು ಬಿಡಿ, ಪುಣ್ಯಬರುತ್ತದೆ, ಆಕುಳುಗಳಿಂದಲೇ ಜೀವನ ಸಾಗಿಸುತ್ತಿದ್ದೇನೆ” ಎಂದು ಕಣ್ಣೀರು ಹಾಕುತ್ತಲೇ ಲಾರಿ ಹತ್ತಿ ಕೆಲ ಹೊತ್ತು ಹೈಡ್ರಾಮಾ ಸೃಷ್ಟಿಸಿದರು. ಆದರೆ ಹಸುಗಳು ಹಟ್ಟಿಯಲ್ಲಿ ಇರದೇ ರಸ್ತೆ ಮೇಲೆ ಇದ್ದ ಕಾರಣ, ಅದನ್ನು ಗೋಶಾಲೆಗೆ ಸ್ಥಳಾಂತರ ಮಾಡಲಾಗಿದೆ.

ಅಷ್ಟೇ ಅಲ್ಲದೇ, ನಗರಸಭೆಯವರು ಈ ಹಿಂದೆಯೀ ಜಾನುವಾರುಗಳನ್ನು ರಸ್ತೆ ಮೇಲೆ ಬಿಡದಂತೆ ಸೂಚನೆ ನೀಡಿದ್ದರು. ಆದರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ಆಪರೇಷನ್ ಪುಣ್ಯಕೋಟಿ ಮಾಡಿದ ನಗರಸಭೆ ಅಧಿಕಾರಿಗಳು ರಸ್ತೆ ಮೇಲಿದ್ದ ಎಲ್ಲಾ ಅನೇಕ ಹಸುಗಳನ್ನು ಗೋಶಾಲೆಗೆ ಸ್ಥಳಾಂತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net