ರೆಡ್‌ಜೋನ್ ಪಟ್ಟಿಯಲ್ಲಿ ಜಿಲ್ಲೆ : ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿ, ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ

29 RMN-MGD P 1
Published on

ಮಾಗಡಿ : ಕೇಂದ್ರ ಸರ್ಕಾರ ದೇಶದ 70 ಜಿಲ್ಲೆಗಳನ್ನು ರೆಡ್‌ಜೋನ್ ಎಂದು ಘೋಷಿಸಿದ್ದು ಅವುಗಳಲ್ಲಿ ರಾಜ್ಯದ 6 ಜಿಲ್ಲೆಗಳು ಸೇರಿದ್ದು, ರಾಮನಗರವೂ ಒಂದಾಗಿರುವುದು ದುರಂತ. ಇದರಿಂದ ಹೊರಬರಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ ಮಾಡಿದರು.

ಪಟ್ಟಣದ ಸೋಮೇಶ್ವರ ದೇವಾಲಯದ ಬಳಿ ಶನಿವಾರ ತಾಲೂಕು ಆರೋಗ್ಯಾಧಿಕಾರಿಗೆ ಆಂಬುಲೆನ್ಸ್ ಹಸ್ತಾಂತರಿಸಿ ಮಾತನಾಡಿ, ಸೋಂಕಿತ ಸಂಖ್ಯೆ ಕಡಿಮೆಯಾಗುತ್ತಿದ್ದು ಕರೊನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಈ ಸಂಬಂಧ ಸೋಲೂರು ಆಸ್ಪತ್ರೆಯಲ್ಲಿ ಮಕ್ಕಳಿಗೆ ಪ್ರತ್ಯೇಕವಾಗಿ 25 ಬೆಡ್ ಐಸಿಯು ಪ್ರಾರಂಭಿಸುವಂತೆ ಮನವಿ ಮಾಡಿದರು.

108 ಆಂಬುಲೆನ್ಸ್‌ಗೆ ಹೆಚ್ಚು ಒತ್ತಡ ಇರುವುದರಿಂದ ತಾವರೆಕೆರೆ ಮೂರ್ತಿಯವರ ಸಹಕಾರದಿಂದ ಆಂಬುಲೆನ್ಸ್ ನೀಡಲಾಗಿದೆ. ಆಂಬುಲೆನ್ಸ್ ನಿರ್ವಹಣೆಯನ್ನು ಭಾಗ್ಯಲಕ್ಷಿ ಗ್ಯಾಸ್ ಏಜೆನ್ಸಿಯಿಂದ ಮಾಡಲಾಗುವುದು ಎಂದರು.

ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ಸೋಂಕಿತರ ಸಂಪರ್ಕದಲ್ಲಿದ್ದುಕೊಂಡು ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಅವರ ಬೆನ್ನುತಟ್ಟಿ ಪ್ರೋತ್ಸಾಹಿಸಲು ಪ್ರತಿ ತಿಂಗಳು ತಲಾ 500 ರೂ. ನೀಡಲಾಗುವುದು. ಇಂದು 2 ತಿಂಗಳ ಮೊತ್ತ 1000 ರೂ.ಗಳನ್ನು 69 ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ ಎಂದರು.

ಮೂರು ತಿಂಗಳವರೆಗೆ ಮೈಕ್ರೋ ೈನಾನ್ಸ್ ಸಂಸ್ಥೆಗಳು ರೈತರಿಂದ ಸಾಲ ವಸೂಲಿ ಮಾಡದಂತೆ ಪಿರಿಯಾಪಟ್ಟಣ ತಹಸೀಲ್ದಾರ್ ಆದೇಶಿಸಿದ್ದಾರೆ. ಇದೇರೀತಿ ಮಾಗಡಿ ತಹಸೀಲ್ದಾರ್ ಕೂಡ ಆದೇಶ ನೀಡಬೇಕು ಎಂದು ಮಂಜುನಾಥ್ ಒತ್ತಾಯಿಸಿದರು.

ತಾಲೂಕಿನಲ್ಲಿ ಅಂಬುಲೆನ್ಸ್ ನಿರ್ವಹಣೆ, ಸಹಾಯವಾಣಿ ಇಲ್ಲ, ಜಿಲ್ಲೆಯಲ್ಲಿ ಎಷ್ಟು ಅಕ್ಸಿಜನ್ ಬೆಡ್ ಇವೆ, ಯಾರನ್ನು ಯಾವ ಆಸ್ಪತ್ರೆಗೆ ಕಳುಹಿಸಬೇಕು ಎಂದು ಗೊತ್ತಾಗುತ್ತಿಲ್ಲ. ಪ್ರಭಾವಿಗಳಿಗೆ ಅಕ್ಸಿಜನ್ ಬೆಡ್ ಇವೆ, ಬಡವರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಕಳಿಸುತ್ತಾರೆ. ಇಲ್ಲಿ ಹೆಚ್ಚು ಜನ ಮೃತಪಡುತ್ತಾರೆ ಎಂಬ ಆರೋಪವಿದ್ದು ಇದನ್ನು ಸರಿಪಡಿಸಿ ಜನರಲ್ಲಿ ವಿಶ್ವಾಸ ತುಂಬುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.

ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ, ಸಮಾಜ ಸೇವಕರಾದ ತಾವರೆಕೆರೆ ಮೂರ್ತಿ, ದಂಡೇನಹಳ್ಳಿ ದೀಪು, ಪುರಸಭೆ ಸದಸ್ಯರು, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ಎಂ.ಆರ್.ಮಂಜುನಾಥ್, ಒಕ್ಕಲಿಗರ ಸಂಘದ ಪದಾಧಿಕಾರಿಗಳು, ಟಿಎಚ್‌ಒ ಡಾ.ಸತೀಶ್, ಡಾ. ಸಿ.ಕೆ.ರಾಜೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ್ ಇತರರು ಇದ್ದರು.

ಹೈಕೋರ್ಟ್‌ನಲ್ಲಿ ದಾವೆ : ಮುಂಜಾಗ್ರತೆಯೊಂದಿಗೆ ರಂಗನಾಥಸ್ವಾಮಿ ಜಾತ್ರೆ ಮಾಡಿ ಎಂದು ಹೇಳಿದ್ದೆ. ಆದರೆ ಜಾತ್ರೆಗೆ ಹೊರಗಡೆಯಿಂದ ಜನ ಸೇರಿ ಕರೊನಾ ಸೋಂಕು ಹರಡಿ ಸಾಕಷ್ಟು ಮಂದಿ ಮೃತಪಟ್ಟರು. ಮೃತಪಟ್ಟವರ ಕುಟುಂಬಕ್ಕೆ ನ್ಯಾಯ ಕೊಡುವವರು ಯಾರು. ಈ ಸಂಬಂಧ ಜಿಲ್ಲಾಡಳಿತ, ತಾಲೂಕು ಆಡಳಿತ ಮೃತಪಟ್ಟವರ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ದಾವೆ ಹೂಡುವುದಾಗಿ ಬಾಲಕೃಷ್ಣ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net