ಕರೊನಾ ಪರೀಕ್ಷೆ ಮಾಡಿಸದಿದ್ದರೆ ಮನೆಯಲ್ಲೇ ದಿಗ್ಬಂಧನ...!

covid-19-swab-sample-test 28 APR 20
Published on

ನವದೆಹಲಿ: ಚೀನಾದಲ್ಲೇ ಹುಟ್ಟಿದ ಕರೊನಾ ಆ ದೇಶಕ್ಕೆ ಸಂಕಷ್ಟವನ್ನು ತಂದಿಟ್ಟಿಲ್ಲ ಎನ್ನುವಂತಿಲ್ಲ. ಅಂದಾಜು ಮೂರು ತಿಂಗಳವರೆಗೆ ಪ್ರಜೆಗಳನ್ನು ಮನೆಯಲ್ಲೇ ದಿಗ್ಬಂಧನದಲ್ಲಿರಿಸಿದ ಕಮ್ಯೂನಿಸ್ಟ್​ ರಾಷ್ಟ್ರ, ಅಕ್ಷರಶಃ ಕರೊನಾದ ಹಡೆಮುರಿ ಕಟ್ಟುತ್ತಿದೆ.

ಚೀನಾದಲ್ಲೀಗ ಕರೊನಾ ಪ್ರಕರಣಗಳು ಕಡಿಮೆಯಾಗಿದ್ದರೂ ಎರಡನೇ ಅಲೆ ಭಾರಿ ದೊಡ್ಡ ಹೊಡೆತ ಕೊಡಲಿದೆ ಎನ್ನುವುದು ಆ ದೇಶಕ್ಕೆ ಅರಿವಿರದ ಸಂಗತಿಯೇನಲ್ಲ.

15 ದಿನಗಳ ಹಿಂದಷ್ಟೇ ವುಹಾನ್​ ವಸತಿ ಸಮುಚ್ಚಯವೊಂದರ ಐವರಲ್ಲಿ ಕರೊನಾ ಸೋಂಕು ಕಂಡು ಬರುತ್ತಿದ್ದಂತೆ ಚೀನಾ ದಿಗ್ಗನೇ ಮೇಲೆದ್ದು ಕುಳಿತಿದೆ. ವುಹಾನ್​ನ ಪ್ರತಿಯೊಬ್ಬರನ್ನು ಕರೊನಾ ತಪಾಸಣೆಗೆ ಒಳಪಡಿಸಲು ನಿರ್ಧರಿಸಿ ಆ ಕ್ಷಣದಿಂದಲೇ ಕಾರ್ಯಾಚರಣೆಗಿಳಿಯಿತು. ಅಷ್ಟಕ್ಕೂ 10 ದಿನಗಳಲ್ಲಿ 110 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸುವ ಅಸಾಧ್ಯ ಕಾರ್ಯವನ್ನು ಅಲ್ಲಿನ ಆರೋಗ್ಯ ಸಿಬ್ಬಂದಿಗೆ ವಹಿಸಿದೆ.

ಇದ್ಯಾಕೆ ಅಸಾಧ್ಯ ಕಾರ್ಯವೆಂದರೆ, ಕರೊನಾ ಸೋಂಕು ಕಾಣಿಸಿಕೊಂಡ ಅಂದಾಜು ಎರಡೂವರೆ ತಿಂಗಳಲ್ಲಿ ಭಾರತದಲ್ಲಿ 25-30 ಲಕ್ಷ ಜನರನ್ನು ಈವರೆಗೆ ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಚೀನಾ ಕಳೆದ 14 ದಿನಗಳಲ್ಲಿ 65 ಲಕ್ಷಕ್ಕೂ ಅಧಿಕ ಜನರ ಗಂಟಲು ದ್ರವ ಸಂಗ್ರಹಿಸಿ ತಪಾಸಣೆ ಮಾಡಿದೆ. ಕೆಲ ದಿನಗಳಲ್ಲಿ 50 ಲಕ್ಷಕ್ಕೂ ಅಧಿಕ ಜನರ ಪರೀಕ್ಷೆ ನಡೆಸಲಿದೆ.

ಗಂಟಲು ದ್ರವ ಮಾದರಿ ಸಂಗ್ರಹದ ಕಿಟ್​ ಹಿಡಿದ ಆರೋಗ್ಯ ಸಿಬ್ಬಂದಿ ಜನರಿದ್ದಲ್ಲಿಗೇ ತೆರಳುತ್ತಿದ್ದಾರೆ. ಕಟ್ಟಡ ನಿರ್ಮಾಣ ಸ್ಥಳ, ಮಾರುಕಟ್ಟೆ ಮೊದಲಾದೆಡೆ ಹೋಗಿ ತಪಾಸಣೆ ನಡೆಸುತ್ತಿದ್ದಾರೆ. ಜನವಸತಿ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಇನ್ನು, ಮನೆಯಿಂದ ಹೊರಗೆ ಬಾರಲು ಸಾಧ್ಯವಾಗದ ಹಿರಿಯ ನಾಗರಿಕರು, ಅಂಗವಿಕಲರಿಗೆ ದೂರವಾಣಿ ಕರೆಗಳನ್ನು ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಇದಕ್ಕಾಗಿ ಬೇರೆಡೆಗಳಿಂದ ಆರೋಗ್ಯ ಕಾರ್ಯಕರ್ತರನ್ನು ವುಹಾನ್​ಗೆ ಕಳುಹಿಸಲಾಗಿದೆ. ಕೋಟ್ಯಂತರ ಡಾಲರ್​ ಖರ್ಚು ಮಾಡಲಾಗುತ್ತಿದೆ ಅವಿರತ ಶ್ರಮದ ಬಳಿಕ 65 ಲಕ್ಷ ಜನರ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರೊನಾ ಸೋಂಕು ಕಡಿಮೆಯಾಗಿರುವಗ ಇಷ್ಟೆಲ್ಲ ಕಸರತ್ತು ಬೇಕೆ ಎಂದು ಜನರು ಪ್ರಶ್ನಿಸುತ್ತಿದ್ದರೂ ತಜ್ಞರು ಹೇಳೋದೇ ಬೇರೆ. ಸೋಂಕು ತಗ್ಗಿದ್ದಾಗಲೇ ತೀವ್ರ ಎಚ್ಚರ ವಹಿಸಬೇಕು ಎನ್ನುತ್ತಾರೆ. ಪ್ರಯೋಗಾಲಯಗಳಲ್ಲಿ ಪ್ರತಿದಿನ 46 ಸಾವಿರಕ್ಕೂ ಅಧಿಕ ಮಾದರಿಗಳನ್ನು ತಪಾಸಣೆ ಮಾಡಲಾಗುತ್ತಿದೆ. ಈ ಪರೀಕ್ಷೆಯಿಂದಾಗಿ 200ಕ್ಕೂ ಅಧಿಕ ಜನರಲ್ಲಿ ಸೋಂಕು ಇರುವುದು ಗೊತ್ತಾಗಿದೆ.

ವುಹಾನ್​ನಲ್ಲಿ ಯಾರನ್ನೂ ಪರೀಕ್ಷೆಯಿಂದ ಹೊರತಾಗಿಸಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಒಂದು ವೇಳೆ ಜನರು ಪರೀಕ್ಷೆ ಮಾಡಿಸಿಕೊಳ್ಳದಿದ್ದರೆ ಅವರ ಆರೋಗ್ಯ ಸೂಚ್ಯಂಕವು ಹಸಿರು ಬಣ್ಣದಿಂದ ಹಳದಿಗೆ ತಿರುಗುತ್ತದೆ. ಹೀಗಾದಾಗ ಅವರು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವಂತಿಲ್ಲ. ಕೆಲಸಕ್ಕೆ ಹೋಗುವಂತಿಲ್ಲ, ಪ್ರಯಾಣಕ್ಕೂ ಅವಕಾಶವಿರುವುದಿಲ್ಲ. ಅಲ್ಲದೇ, ನಿತ್ಯದ ಚಟುವಟಿಕೆಗಳಿಗೂ ತೊಂದರೆಯಾಗಲಿದೆ ಎಂದು ಸರ್ಕಾರ ಎಚ್ಚರಿಸಿದೆ.

ಹಾಗಂತಾ ಇದನ್ನು ವಿರೋಧಿಸುವವರಿಲ್ಲ ಎನ್ನುವಂತಿಲ್ಲ. ಹೊರಗಿನ ಜಗತ್ತಿಗೆ ತೋರಿಸಲು ಚೀನಾ ಸರ್ಕಾರ ಇದನ್ನೆಲ್ಲ ಮಾಡುತ್ತಿದೆ. ನಮಗೆ ತೊಂದರೆ ಕೊಡುತ್ತಿದೆ ಎಂದು ಟೀಕಿಸುವವರು ಇದ್ದಾರೆ. ಆದರೆ, ಮಕ್ಕಳನ್ನು ಶಾಲೆಗೆ ಸೇರಿಸದ, ದಿನಿತ್ಯದ ವಸ್ತುಗಳನ್ನು ಖರೀದಿಸಲು ಆಗದ ಸ್ಥಿತಿ ಎದುರಾಗುವುದನ್ನು ತಪ್ಪಿಸಲು ಇದನ್ನೆಲ್ಲ ಪಾಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net