ಕೊರೊನಾ ವೈರಸ್​ ದಾಳಿಗೆ ಮತ್ತೊಬ್ಬ ವೈದ್ಯ ಬಲಿ: 7 ವೈದ್ಯಕೀಯ ಸಹಾಯಕರು ಮೃತ

China Director
Published on

ಬೀಜಿಂಗ್​: ಚೀನಾದಲ್ಲಿ ಕೊರೊನಾ ವೈರಸ್​ ತನ್ನ ಮೃತ್ಯಕೂಪವನ್ನು ಮುಂದುವರಿಸಿದ್ದು, ಪ್ರಾಣ ಉಳಿಸುವ ವೈದ್ಯರನ್ನು ಬಿಡದೆ ಬಲಿ ಪಡೆದುಕೊಳ್ಳುತ್ತಿದೆ. ಇತ್ತೀಚಿನ ಬೆಳವಣಿಗೆಯಂತೆ ವುಹಾನ್​ ಆಸ್ಪತ್ರೆಯೊಂದರ ನಿರ್ದೇಶಕರನ್ನು ಕೊರೊನಾ ತನ್ನ ಸಾವಿನ ಬಲೆಗೆ ಕೆಡವಿಕೊಂಡಿದೆ.

ಲಿಯು ಝಿಮಿಂಗ್​ ಮೃತ ದುರ್ದೈವಿ. ವುಹಾನ್​​​ನ ವುಚಂಗ್ ಆಸ್ಪತ್ರೆಯ ನಿರ್ದೇಶಕರಾಗಿದ್ದರು. ಮಂಗಳವಾರ ಬೆಳಗ್ಗೆ ಸಾಕಷ್ಟು ಪ್ರಯತ್ನದ ನಡುವೆಯೂ ಕೊನೆಯುಸಿರೆಳೆದಿದ್ದಾರೆ ಎಂದು ಚೀನಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಕಳೆದ ವಾರ ಆರು ಮಂದಿ ವೈದ್ಯಕೀಯ ಸಹಾಯಕರನ್ನು ಕೊರೊನಾ ವೈರಸ್​ ಬಲಿಪಡೆದಿತ್ತು. ಇದಲ್ಲದೆ 1716 ಮಂದಿ ಸಹಾಯಕರಿಗೆ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ.

ಕಳೆದ ಡಿಸೆಂಬರ್​ನಲ್ಲಿ ವೈರಸ್​ ಸಮಸ್ಯೆ ಉದ್ಭವಗೊಂಡಾಗಲೇ ಆ ಬಗ್ಗೆ ಎಚ್ಚರಿಕೆ ನೀಡಿದ್ದ ವೈದ್ಯ ವೆನ್​ಲಿಯಾಂಗ್​ ಕೂಡ ಇದೇ ಸೋಂಕಿನಿಂದಲೇ ಸಾವಿಗೀಡಾಗಿದ್ದರು. ಈ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೆ, ಚೀನಾದ್ಯಂತ ಟೀಕೆಗೆ ಗುರಿಯಾಗಿ ಪ್ರಕರಣದ ತನಿಖೆಗೂ ಆದೇಶಿಸಲಾಗಿದೆ. ಇದೀಗ ಮತ್ತೊಬ್ಬ ವೈದ್ಯರು ಮೃತಪಟ್ಟಿರುವುದು ದುರ್ದೈವದ ಸಂಗತಿಯಾಗಿದೆ.

ಕೊರೊನಾದಿಂದ ವೈದ್ಯರೇ ತಮ್ಮ ಪ್ರಾಣವನ್ನು ಬಿಡುತ್ತಿರುವುದು ಸಾಮಾನ್ಯ ಜನರನ್ನು ಆತಂಕಕ್ಕೆ ದೂಡಿದೆ. ಸದ್ಯ ಕೊರೊನಾ ವೈರಸ್​ನಿಂದ 1900 ಮಂದಿ ಸಾವಿಗೀಡಾಗಿದ್ದು, 72 ಸಾವಿರ ಮಂದಿಗೆ ಸೋಂಕು ತಗುಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net