ಜಾತಿ ಕಾಲಂನಲ್ಲಿ ಈಡಿಗ ಎಂದು ಬರೆಯಿಸಿ

skp chamaraj
ಚಾಮರಾಜ್
Published on

ಶಿಕಾರಿಪುರ: ಜಾತಿ ಗಣತಿಗಾಗಿ ಸಿಬ್ಬಂದಿ ಮನೆಗೆ ಬಂದಾಗ ಜಾತಿ ಕಾಲಂನಲ್ಲಿ ಈಡಿಗ ಎಂದು ಬರೆಸಿ, ಉಪಜಾತಿ ಕಾಲಂನಲ್ಲಿ ಆರ್ಯ ಈಡಿಗ ಜಾತಿಯ ಉಪ ಪಂಗಡಗಳಾದ ದೀವರು, ನಾಮಧಾರಿ, ಪೂಜಾರಿ, ಈಳಿಗರ್ ಎಂದು ಬರೆಸಬೇಕು ಎಂದು ಶಿಕಾರಿಪುರದ ಶ್ರೀ ನಾರಾಯಣಗುರು ಈಡಿಗ ಬಳಗದ ನಗರಾಧ್ಯಕ್ಷ ಚಾಮರಾಜ ಹೇಳಿದರು.

ಈಡಿಗರು ಜಾತಿ ಗಣತಿಯಲ್ಲಿ ಉಪ ಜಾತಿ ಬರೆಸಬೇಕು. ರಾಜ್ಯದ ಆರ್ಯ ಈಡಿಗರ ಜಾತಿ ಪಟ್ಟಿಯಲ್ಲಿ ಒಟ್ಟು 26 ಪಂಗಡಗಳಿವೆ. ಆದರೆ ಕೆಲವೆಡೆ ಅಧಿಕಾರಿಗಳು ಜಾತಿ ಗಣತಿಗೆ ಮನೆ ಬಾಗಿಲಿಗೆ ಬಂದಾಗ ಉಪ ಜಾತಿಗಳನ್ನು ಮಾತ್ರ ಬರೆಸುತ್ತಿದ್ದು, ಈಡಿಗ ಎಂದು ನಮೂದಿಸದೆ ಬಿಟ್ಟಿದ್ದಾರೆ. ಇದರಿಂದ ಮುಂದೆ ಮಕ್ಕಳ ಶಿಕ್ಷಣ ಮತ್ತು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

80ರ ದಶಕದಿಂದಲೂ ಆರ್ಯ ಈಡಿಗರ ಜಾತಿಯಲ್ಲಿ 26 ಒಳಪಂಗಡಗಳಿವೆ. ವಿವಿಧ ಉದ್ಯೋಗಗಳಿಂದ ಹಲವೆಡೆ ಹಂಚಿ ಹೋಗಿದ್ದಾರೆ. ಉಪಜಾತಿಗಳನ್ನೇ ನಮೂದಿಸಿದರೆ ಮುಂದೆ ದೊಡ್ಡ ಬೆರೆ ತೆರಬೇಕಾಗುತ್ತದೆ. ಆದ್ದರಿಂದ ಈಡಿಗ ಎಂದು ನಮೂದಿಸಿ ಪಕ್ಕದಲ್ಲಿ ಉಪಜಾತಿಗಳನ್ನು ಬರೆಸಬೇಕೆಂದು ಮನವಿ ಮಾಡಿದರು.

ತಾಲೂಕು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಪ್ರಕಾಶ್ ಮಾತನಾಡಿ, ಸೆ.7ರಂದು ಬೆಳಗ್ಗೆ 10 ಗಂಟೆಗೆ ತಾಪಂ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಬಿ.ವೈ.ವಿಜಯೇಂದ್ರ ಭಾಗವಹಿಸುವರು.

ಈಡಿಗ ಸಮಾಜದ ಪ್ರಮುಖರಾದ ಅಣ್ಣಪ್ಪ, ಬಿ.ನಾಗರಾಜ್, ವೈಭವ್ ಬಸವರಾಜ್, ಚೇತನ್, ದುರ್ಗಪ್ಪ, ನಾಗರಾಜ್ ಮೇಸ್ತ್ರಿ, ಪ್ರಭಾಕರ್ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net