

ಸೊರಬ: ಗಣತಿದಾರರು ಮನೆಗೆ ಬಂದಾಗ ದೀವರು ಎಂದು ಬರೆಯಿಸಬೇಕು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ಸಮಾಜದ ಮುಖಂಡ ರಾಜಪ್ಪ ಮಾಸ್ತರ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಡಿಗ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ದೀವರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿವೆ. 2015ರ ಗಣತಿ ಸಂದರ್ಭ ದೀವರು ಬಹಳಷ್ಟು ಜನರು ಈಡಿಗ ಎಂದು ಬರೆಯಿಸಿದ್ದರ ಪರಿಣಾಮ ದೀವರ ಜನಸಂಖ್ಯೆ ಕಡಿಮೆಯಾಗಿದೆ. ಹೀಗೆ ಮುಂದುವರಿದರೆ ಮುಂದಿನ ಕೆಲವೇ ವರ್ಷಗಳಲ್ಲಿ ಸರ್ಕಾರಿ ದಾಖಲೆಗಳಲ್ಲಿ ದೀವರು ಎಂಬ ಪದ ಕಳೆದು ಹೋಗುವುದು ನಿಶ್ಚಿತ ಎಂದರು.
ಹಲವು ದಶಕಗಳ ಹಿಂದೆ ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಗಳ ದೀವರು, ನಾಮಧಾರಿ ನಾಯ್ಕ, ದಕ್ಷಿಣ ಕನ್ನಡದ ಬಿಲ್ಲವರು, ಈಡಿಗರೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ. ಇದರಿಂದ ರಾಜಕೀಯದಲ್ಲಿ ಈಡಿಗರು ಎಂಬ ಸಮೂಹ ಸೃಷ್ಟಿಯಾಗಿದೆ. ಆದರೆ ಪಕ್ಕದ ಜಿಲ್ಲೆಗಳ ಬಿಲ್ಲವರು ಮತ್ತು ನಾಮಧಾರಿ ನಾಯ್ಕರು ತಮ್ಮ ಮೂಲ ಗುರುತನ್ನು ಬಿಟ್ಟುಕೊಡದೆ ಇಂದಿಗೂ ದಾಖಲೆಗಳಲ್ಲಿ ಬಿಲ್ಲವರು, ನಾಮಧಾರಿ ನಾಯ್ಕ ಎಂದೇ ಗುರುತಿಸಿಕೊಂಡಿದ್ದಾರೆ. ಆದರೆ ಶಿವಮೊಗ್ಗ ಜಿಲ್ಲೆಯ ಬಹುತೇಕ ಕಡೆ ಹಾಗೂ ಸಿದ್ದಾಪುರ, ಶಿರಸಿ ಭಾಗದಲ್ಲಿ ಮೂಲ ಗುರುತನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ 4 ಲಕ್ಷಕ್ಕೂ ಹೆಚ್ಚು ದಾಖಲಾಗಬೇಕಿದ್ದ ಈಡಿಗರ ಜನಸಂಖ್ಯೆ 60 ಸಾವಿರಕ್ಕೆ ಇಳಿದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೂ ಸುಧಾರಣಾ ಕಾಯ್ದೆ ರಚನೆಗೆ ಕಾರಣವಾದ ಕಾಗೋಡು ಸತ್ಯಾಗ್ರಹದ ರೂವಾರಿಗಳು, ದೀವರ ಸಮುದಾಯದ ರೈತಾಪಿ ನಾಯಕರು ನಮ್ಮವರೇ ಆಗಿದ್ದರು. ರಾಜ್ಯದಲ್ಲಿ ಪ್ರತಿಯೊಂದು ಜಾತಿಗೆ ಸೇರಿದ ಜನರ ಸಂಖ್ಯೆಯೊಂದಿಗೆ ಆಯಾ ಜಾತಿಯ ಜನರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿರುವ ಸಂದರ್ಭ ದೀವರ ಸಮುದಾಯದ ದಾಖಲೆ ಸರಿಯಾಗಿರಬೇಕು. ಅದಕ್ಕಾಗಿ ಗಣತಿ ಸಂದರ್ಭ ಎಲ್ಲ ಈಡಿಗರು ‘ದೀವರು’ ಎಂದು ಬರೆಯಿಸಬೇಕು ಎಂದರು.
ಶ್ರೀಧರ, ವೈ.ಜಿ.ಪುಟ್ಟಸ್ವಾಮಿ, ನಾಗೇಶ, ಪರಶುರಾಮ, ರಾಜಣ್ಣ, ಪ್ರಕಾಶ್, ಲಿಂಗೇಶ್, ತ್ಯಾಗರಾಜ, ರಾಮಪ್ಪ, ಡಾ. ಜ್ಞಾನೇಶ, ಪ್ರಶಾಂತ, ಮಂಜಪ್ಪ, ನಿಲೇಶ, ಯಶೋಧರ, ದುರ್ಗಪ್ಪ ಇತರರಿದ್ದರು.