ಗಣತಿಯಲ್ಲಿ ಬ್ರಾಹ್ಮಣ ಎಂದೇ ಬರೆಸಿ

bdvt
ಭದ್ರಾವತಿಯಲ್ಲಿ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿಯಲ್ಲಿ ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿದರು. ಕೃಷ್ಣಮೂರ್ತಿ ಸೋಮಯಾಜಿ ಇದ್ದರು.
Published on

ಭದ್ರಾವತಿ: ಕೇಂದ್ರ ಸರ್ಕಾರದಿಂದ ನಡೆಯುವ ಜನಗಣತಿ ಕಾಲಂನಲ್ಲಿ ಬ್ರಾಹ್ಮಣ ಸಮಾಜದವರು ಬ್ರಾಹ್ಮಣ ಎಂಬುದಾಗಿ ಬರೆಸಬೇಕು ಎಂದು ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ರಮೇಶ್ ತಿಳಿಸಿದರು.

ಜನ್ನಾಪುರದ ಶ್ರೀ ಮಹಾಗಣಪತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಜಾತಿ ಜನಗಣತಿ ವರದಿಯಲ್ಲಿ ಬ್ರಾಹ್ಮಣರ ಜನಸಂಖ್ಯೆ 14 ಲಕ್ಷ ಎಂದು ದಾಖಲಾಗಿದೆ. ಆದರೆ ವಾಸ್ತವದಲ್ಲಿ 45 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಮೂಡಿಸಬೇಕು. ಸಮಾಜ ಒಗ್ಗಟ್ಟಾಗಿದ್ದರೆ ನಾವೆಲ್ಲರೂ ಒಂದಾಗಲು ಸಾಧ್ಯ ಎಂದರು.

ಶಂಕರತತ್ವ ಅಭಿಯಾನದ ಪ್ರಮುಖರಾದ ಕೃಷ್ಣಮೂರ್ತಿ ಸೋಮಯಾಜಿ ಮಾತನಾಡಿ, ಜಗತ್ತಿನಲ್ಲಿ ಗುರುವಿನ ಅನುಗ್ರಹವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಸಂಕಲ್ಪಿತ ಕಾರ್ಯಗಳಿಗೂ ಗುರುವಿನ ಕೃಪೆ ಬೇಕು. ಆಗ ಆ ಕಾರ್ಯಗಳು ಸಾಂಗವಾಗಿ ನೆರವೇರುತ್ತವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

ಗುರು ಹಾಗೂ ದೇವರು ಎಂಬ ವಿಚಾರ ಬಂದಾಗ ಮೊದಲು ಗುರುವಿಗೆ ನಮಸ್ಕರಿಸಿ ನಂತರ ದೇವರಿಗೆ ನಮಸ್ಕಾರ ಮಾಡುತ್ತೇವೆ. ಈ ಕಾರಣ ಗುರುವಿಗೆ ಅಷ್ಟೊಂದು ಮಹತ್ವ ಇದೆ. ಈ ಹಿಂದೆ ನಗರದಲ್ಲಿ ಕೇವಲ 12 ದಿನಗಳಲ್ಲಿ 21 ಶಂಕರರ ತತ್ವ ಸಂದೇಶಗಳ ಸಭೆಯನ್ನು ಆಯೋಜಿಸಿದ್ದು ದಾಖಲೆಯ ಸಂಗತಿ ಎಂದು ತಿಳಿಸಿದರು.

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಹತರಾದ ಅಮಾಯಕರ ಕುಟುಂಬಗಳಿಗೆ ಶ್ರೀ ಶೃಂಗೇರಿ ಶಂಕರ ಮಠದಿಂದ ತಲಾ ಎರಡು ಲಕ್ಷ ರೂ. ಅನುಗ್ರಹ ಪೂರ್ವಕವಾಗಿ ನೀಡಿ ಆ ಕುಟುಂಬಗಳನ್ನು ಗುರುಗಳು ಸಂತೈಸಲಿದ್ದಾರೆ. ಪೂಜ್ಯರು ಮಾನವೀಯ ಅನುಕಂಪ ತೋರಿರುವುದು ದೇಶಾಭಿಮಾನದ ಸಂಗತಿ ಎಂದರು.

ಮುರಳೀಧರ ಶರ್ಮ, ಅನಂತಪದ್ಮನಾಭ, ಸುಬ್ರಹ್ಮಣ್ಯ, ಸ್ವಪ್ನಾ ಕುಮಾರ್ ತೇಲ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net