

ಬರ್ನ್: ಈ ಮೇಲಿನ ಫೋಟೋದಲ್ಲಿರುವ ಕೂದಲು ಇಲ್ಲದ ಸಿಡುಕು ಮೂತಿಯ ಸ್ಫಿಂಕ್ಸ್(ಸಿಂಹನಾರಿ) ಬೆಕ್ಕನ್ನು ನೋಡಿದರೆ ಒಮ್ಮೆ ಭಯವಾಗುವುದಂತು ಖಂಡಿತ. ಹೀಗಿದ್ದರೂ ಎಲ್ಲ ಬೆಕ್ಕುಗಳಂತೆ ಇದು ಕೂಡ ತುಂಬಾ ಮುದ್ದು ಎಂಬುದಕ್ಕೆ ಅದರ ಮಾಲಕಿ ಶೇರ್ ಮಾಡಿಕೊಂಡಿರುವ ವಿಡಿಯೋ ಸಾಕ್ಷಿಯಾಗಿದೆ.
ಅಂದಹಾಗೆ ಸಿಡುಕು ಮೂತಿಯ ಬೆಕ್ಕಿನ ಹೆಸರು ಜೆರ್ಡಾನ್(6). ಸ್ವಿಜರ್ಲ್ಯಾಂಡ್ನ ರುಟಿ ನಗರದಲ್ಲಿ ಮಾಲಕಿಯೊಂದಿಗೆ ವಾಸವಾಗಿದೆ. ಇದರ ತಲೆಯಿಂದ ಕಾಲಿನ ಬೆರಳ ತುದಿಯವರೆಗೂ ಸುಕ್ಕುಗಟ್ಟಿದ ಹೊದಿಕೆಯನ್ನು ಹೊಂದಿದೆ. ಹೀಗಾಗಿ ಇದನ್ನು ಕ್ಯಾಟರ್ಪಿಲ್ಲರ್ ಹಾಗೂ ಏಲಿಯನ್ಗೂ ಹೋಲಿಕೆ ಮಾಡುತ್ತಾರೆ.
ಬೆಕ್ಕಿನ ಮಾಲಕಿ ಶೇರ್ ಮಾಡಿಕೊಂಡಿರುವ ವಿಡಿಯೋವನ್ನು ಡೈಲಿ ಮೇಲ್ ವೆಬ್ಸೈಟ್ ವರದಿ ಮಾಡಿದೆ. ವಿಡಿಯೋದಲ್ಲಿ ಬೆಕ್ಕು ಮುದ್ದು ಮುದ್ದಾಗಿ ಆಡುವ ದೃಶ್ಯವನ್ನು ಕಾಣಬಹುದಾಗಿದೆ. ಅಂದಹಾಗೆ ಮಾಲಕಿಯ ಹೆಸರು ಸಾಂದ್ರಾ ಫ್ಲಿಪ್ಪಿ(47).
ಸಾಂದ್ರಾ ಫ್ಲಿಪ್ಪಿ ಬಳಿ ಒಟ್ಟು ಎರಡು ಬೆಕ್ಕುಗಳಿವೆ. ಅವು ಪ್ರವಾಸ, ಶಾಪಿಂಗ್ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಫ್ಲಿಪ್ಪಿ ಜತೆಯಾಗುತ್ತವೆ. ಈ ಬಗ್ಗೆ ಮಾತನಾಡಿರುವ ಫ್ಲಿಪ್ಪಿ ನೋಡಲು ಸಿಡುಕು ಮೂತಿಯಂತಿದ್ದರು ತುಂಬಾ ಮುದ್ದಾದ ಜೀವಿಗಳು ಎಂದಿದ್ದಾರೆ.
ಪ್ರಾರಂಭದಲ್ಲಿ ಜೆರ್ಡಾನ್ ನೋಡಿದವರು ಸ್ವಲ್ಪ ಭಯಭೀತರಾಗುತ್ತಾರೆ. ಆದರೆ, ತದನಂತರ ಪ್ರೀತಿಸಲು ಆರಂಭಿಸುತ್ತಾರೆ ಎಂದು ಫ್ಲಿಪ್ಪಿ ತಿಳಿಸಿದ್ದಾರೆ. ದಿನನಿತ್ಯ ಬೆಕ್ಕಿನ ಕಣ್ಣುಗಳು, ಕಿವಿ ಮತ್ತು ಕಾಲುಗಳನ್ನು ಶುಚಿಗೊಳಿಸುತ್ತಾರಂತೆ. ಅಲ್ಲದೆ, ಕಾಲಿನ ಉಗುರುಗಳನ್ನು ಕತ್ತರಿಸುವುದಾಗಿ ಫ್ಲಿಪ್ಪಿ ಹೇಳಿದ್ದಾರೆ. ಇತರೆ ಜನರಿಗಿಂತ ತನ್ನ ಸಾಕು ಬೆಕ್ಕು ಆಕೆಯನ್ನು ಹೆಚ್ಚು ಸಂತೋಷದಿಂದ ಇರಿಸುತ್ತದೆ ಎಂದು ಫ್ಲಿಪ್ಪಿ ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್)