ಜೈಲಿನಲ್ಲಿ ವಿಶೇಷ ಆಹಾರಕ್ಕಾಗಿ ಕುಸ್ತಿಪಟು ಸುಶೀಲ್​ ಕುಮಾರ್ ಅರ್ಜಿ: ಮಹತ್ವದ ತೀರ್ಪು ನೀಡಿದ ದೆಹಲಿ ಕೋರ್ಟ್​

Susheel Kumar
Published on

ನವದೆಹಲಿ: ಸಹ ಕುಸ್ತಿಪಟುವನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲುವಾಸಿಯಾಗಿರುವ ಒಲಿಂಪಿಕ್​ ಪದಕ ವಿಜೇತ ಕುಸ್ತಿಪಟು ಸುಶೀಲ್​ ಕುಮಾರ್, ಜೈಲಿನಲ್ಲಿ ವಿಶೇಷ ಆಹಾರ ಹಾಗೂ ಸೌಲಭ್ಯಗಳನ್ನು ನೀಡುವಂತೆ ಆಗ್ರಹಿಸಿ ಸಲ್ಲಿಸಿದ ಅರ್ಜಿಯನ್ನು ದೆಹಲಿ ನ್ಯಾಯಾಲಯ ತಿರಸ್ಕರಿಸಿದೆ. ​

ಪ್ರಸ್ತುತ ಅರ್ಜಿಯ ಮೂಲಕ ಆರೋಪಿ ಅಥವಾ ಅರ್ಜಿದಾರ 2018ರ ದೆಹಲಿ ಕಾರಾಗೃಹ ನಿಯಮಗಳ ಪ್ರಕಾರ ತನ್ನ ದೈನಂದಿನ ಆಹಾರದಲ್ಲಿರುವ ಪ್ರಮಾಣ ಹಾಗೂ ಪೋಷಕಾಂಶಗಳ ಸಾಮಾನ್ಯ ಮೂಲ ಸೇರಿದಂತೆ ಮುಂತಾದ ಯಾವುದೇ ಕೊರತೆಗಳನ್ನು ಹೇಳಿಕೊಳ್ಳುತ್ತಿಲ್ಲ. ಆ ಮೂಲಕ ಆರೋಪಿ ಅಥವಾ ಅರ್ಜಿದಾರರಿಗೆ ಸಮತೋಲಿತ ಮತ್ತು ಆರೋಗ್ಯಕರ ಆಹಾರವನ್ನು ನೀಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಸಹ ಕುಸ್ತಿಪಟುವನ್ನು ಕೊಲೆ ಮಾಡಿರುವ ಆರೋಪ ಸುಶೀಲ್​ ಕುಮಾರ್​​ ವಿರುದ್ಧ ಕೇಳಿಬಂದಿದೆಯೇ ಹೊರತು ಆತ ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇ. ಹೀಗಾಗಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಲಾಗುತ್ತದೆ ಎಂದು ನ್ಯಾಯಾಲಯ ಸುಶೀಲ್​ ಕುಮಾರ್​ ಅರ್ಜಿಗೆ ಖಡಕ್​ ಆಗಿ ಪ್ರತಿಕ್ರಿಯಿಸಿದೆ.

ಸುಶೀಲ್ ಕುಮಾರ್ ಅವರು ತಮ್ಮ ಅರ್ಜಿಯಲ್ಲಿ ಒಮೆಗಾ 3 ಮಾತ್ರೆಗಳು, ಪೂರ್ವ-ತಾಲೀಮು ಪೂರಕಗಳು ಮತ್ತು ಮಲ್ಟಿವಿಟಮಿನ್ ಮಾತ್ರೆಗಳನ್ನು ನೀಡಬೇಕೆಂದು ಒತ್ತಾಯಿಸಿದ್ದರು. ತಾಲೀಮುಗಾಗಿ ವ್ಯಾಯಾಮ ಬ್ಯಾಂಡ್​ಗಳನ್ನು ಸಹ ಬಯಸಿದ್ದರು.

ಸುಶೀಲ್​ ಕುಮಾರ್​ ಮತ್ತು ಆತನ ಸ್ನೇಹಿತರು ಮೇ 4ರಂದು ಸಾಗರ್​ ಧನಕರ್​ ಮತ್ತ ಆತನ ಸ್ನೇಹಿತರಿಬ್ಬರ ಮೇಲೆ ದೆಹಲಿಯ ಛತ್ರಸಾಲ್​ ಸ್ಟೇಡಿಯಂನಲ್ಲಿ ಹಲ್ಲೆ ಮಾಡಿದ್ದರು. ಹಲ್ಲೆಯ ವೇಳೆ ಗಾಯಗೊಂಡ ಮೂವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾಗರ್​ ಮೃತಪಟ್ಟಿದ್ದಾರೆ.

ಪೊಲೀಸ್​ ಬಂಧನದಿಂದ ರಕ್ಷಿಸಿಕೊಳ್ಳಲು ಮೇ 18ರಂದು ಸುಶೀಲ್​ ಕುಮಾರ್​ ದೆಹಲಿ ಕೋರ್ಟ್​ ಮೆಟ್ಟಲೇರಿದ್ದರು. ನನ್ನ ವಿರುದ್ಧದ ತನಿಖೆ ಪಕ್ಷಪಾತವಾಗಿದೆ ಮತ್ತು ಸಂತ್ರಸ್ತನಿಗಾದ ಯಾವುದೇ ಗಾಯಗಳಿಗೂ ನನಗೂ ಸಂಬಂಧವಿಲ್ಲ ಎಂದು ಸುಶೀಲ್​ ವಾದಿಸಿದ್ದರು. ಆದರೆ, ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತು. ಇದೀಗ ಬಂಧನಕ್ಕೆ ಒಳಗಾಗಿರುವ ಸುಶೀಲ್​ ಕುಮಾರ್​ ವಿಚಾರಣೆ ನಡೆಯುತ್ತಿದೆ.

ಅಂದಹಾಗೆ ಸುಶೀಲ್​ 2008ರ ಬೀಜಿಂಗ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಮತ್ತು 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಬೆಳ್ಳಿಯ ಪದಕವನ್ನು ಜಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net