

ಮುಂಬೈ: ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆ, ಗಾಡ್ಫಾದರ್ನ ಬೆಂಬಲವಿಲ್ಲದೆ ಪ್ರೇಕ್ಷಕರ ವಿಶ್ವಾಸ ಗಳಿಸಿ ಛಾಪು ಮೂಡಿಸುವುದು ಅಷ್ಟು ಸುಲಭದ ಮಾತಲ್ಲ. ಇದನ್ನಲ್ಲಾ ಭೇದಿಸಿ ಕೆಲವು ನಟರು ಯಾವುದೇ ಹಿನ್ನೆಲೆ ಇಲ್ಲದೇ ಚಿತ್ರರಂಗದಲ್ಲಿ ಗೆದ್ದು ಬೀಗಿರುವುದನ್ನು ನಾವು ನೋಡಿದ್ದೇವೆ. ಅದರಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರೆಂದರೆ ಜಾನ್ ಅಬ್ರಹಾಂ ಅವರದ್ದು. ಏಕೆಂದರೆ ಈ ನಟ ಚಿತ್ರರಂಗ ಪ್ರವೇಶಿಸುವ ಮೊದಲು ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದು, ಈ ಬಗ್ಗೆ ಮಾತನಾಡಿದ್ದಾರೆ.
ಜಾನ್ ಅಬ್ರಹಾಂ ನಾಯಕನಾಗಿ ನಟಿಸಿರುವ ವೇದಾ ಚಿತ್ರವು ಆಗಸ್ಟ್ 15ರಂದು ಬಿಡುಗಡೆಯಾಗಲಿದ್ದು, ಟ್ರೇಲರ್ ಮೂಲಕ ಸಾಕಷ್ಟು ಸದ್ದು ಮಾಡಿದೆ. ಚಿತ್ರದ ಪ್ರಮೋಷನ್ ವೇಳೆ ತಮ್ಮ ಕಷ್ಟದ ದಿನಗಳನ್ನು ನೆನೆದಿರುವ ಜಾನ್ ತಾವು ದುಡ್ಡು ಉಳಿಸುತ್ತಿದ್ದ ರೀತಿ ಬಗ್ಗೆ ಹೇಳಿದ್ದಾರೆ. ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನ ಸಖತ್ ವೈರಲ್ ಆಗುತ್ತಿದೆ.
ನಾನು ಎಂಬಿಎ ಪದವಿ ಪಡೆದ ಬಳಿಕ ಕಂಪನಿ ಒಂದರಲ್ಲಿ ಮೀಡಿಯಾ ಪ್ಲ್ಯಾನರ್ ಆಗಿ 6,500 ರೂಪಾಯಿ ಸಂಬಳಕ್ಕೆ ಕೆಲಸಕ್ಕೆ ಸೇರಿಕೊಂಡೆ. ನಂತರ ನನಗೆ ಗ್ಲಾಡ್ರಾಗ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲು ಆಫರ್ ಬಂದಿತು. ನಾನು ಸ್ಪರ್ಧೆಯಲ್ಲಿ ಭಾಗಿಯಾದೆ. ತೀರ್ಪುಗಾರರಾಗಿ ಶಾರುಖ್ ಖಾನ್, ಗೌರಿ ಖಾನ್, ಕರಣ್ ಜೋಹರ್, ಕರಣ್ ಕಪೂರ್ ಇದ್ದರು. ನಾನು ಆ ಸ್ಪರ್ಧೆಯಲ್ಲಿ ಗೆದ್ದು 40 ಸಾವಿರ ರೂಪಾಯಿ ಬಹುಮಾನ ಪಡೆದೆ. ಅದು ನನ್ನ ಪಾಲಿಗೆ ದೊಡ್ಡ ಮೊತ್ತವಾಗಿತ್ತು.
ನಾನು ಕೆಲಸದ ಸೇರಿದ ಹೊಸದರಲ್ಲಿ ತುಂಬಾ ಕಡಿಮೆ ಖರ್ಚು ಮಾಡುತ್ತಿದ್ದೆ. ನನ್ನ ಒಂದು ಹೊತ್ತಿಗೆ ಬರಿ 2 ಚಪಾತಿ ಮತ್ತು ದಾಲ್ ಸೇವಿಸುತ್ತಿದ್ದೆ. ಇದರ ಬೆಲೆ ಆರು ರೂಪಾಯಿಯಾಗಿತ್ತು. ನಾನು ಕೆಲಸ ಮುಗಿಸಿ ಮನೆಗೆ ತಡವಾಗಿ ಹೋಗುತ್ತಿದ್ದರಿಂದ ರಾತ್ರಿ ಹೊತ್ತು ಊಟ ಮಾಡುತ್ತಿರಲಿಲ್ಲ. ನನ್ನ ಬಳಿ ಟ್ರೈನ್ ಪಾಸ್ ಇದ್ದುದ್ದರಿಂದ ಬೈಕ್, ಪೆಟ್ರೋಲ್, ಊಟ ಸೇರಿದಂತೆ ಕಡಿಮೆ ಖರ್ಚು ಮಾಡುತ್ತಿದ್ದೆ. ನಾನು ಹೆಚ್ಚಿನ ಹಣವನ್ನು ಉಳಿಸಿ ಈಕ್ವಿಟಿ ಆಧಾರಿಯ ಮ್ಯೂಚುವ;ಲ್ ಫಂಡ್ನಲ್ಲಿ ಹೂಡಿಕೆ ಮಾಡುತ್ತಿದ್ದೆ. ನನ್ನ ವೃತ್ತಿಜೀವನ ಆರಂಭವಾದದ್ದು ಅಲ್ಲಿಂದಲೇ.
ನಾವು ಬಂಡವಾಳಶಾಹಿ ಸಮಾಜದಲ್ಲಿ ವಾಸಿಸುತ್ತಿದ್ದೇವೆ. ಹಣ ಸಂಪಾದಿಸಲು ಇದು ಒಳ್ಳೆಯ ಸಮಯವಾಗಿದ್ದು, ಉತ್ಸಾಹವನ್ನು ಹೊಂದಿರಬೇಕು. ಹಣ ಗಳಿಸುವುದರಲ್ಲಿ ಯಾವುದೇ ಹಾನಿ ಇಲ್ಲ ಆದರೆ ಆ ಹಣವನ್ನು ನೀವು ಏನು ಮಾಡುತ್ತಿದ್ದೀರಿ ಎಂಬುದು ಮುಖ್ಯ ವಿಷಯ. ಅದಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ರೂಪುಗೊಂಡಿರುವುದು ಎಂದು ನಟ ಜಾನ್ ಅಬ್ರಹಾಂ ಹೇಳಿದ್ದಾರೆ.