

ನವದೆಹಲಿ : ಬಂಗಾಳದಲ್ಲಿ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಅವರ ಟಿಎಂಸಿಯನ್ನು ವಿಜಯ ಪಥದಲ್ಲಿ ನಡೆಸಿದ ಖ್ಯಾತಿಯ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಕಾಂಗ್ರೆಸ್ ಸೇರುವ ಸೂಚನೆಗಳು ಬಂದಿವೆ. ಮಂಗಳವಾರದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಿವಾಸದಲ್ಲಿ ಕಿಶೋರ್ ನಡೆಸಿದ 'ಮಹತ್ವದ ಮಾತುಕತೆ'ಯ ನಂತರ ಈ ಊಹೆಗಳು ಹರಿದಾಡುತ್ತಿವೆ.
ಜುಲೈ 13 ರಂದು ಸೋನಿಯಾ ಗಾಂಧಿ, ರಾಹಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೂವರನ್ನೂ ಜೊತೆಯಾಗಿ ಪ್ರಶಾಂತ್ ಕಿಶೋರ್ ಭೇಟಿ ಮಾಡಿದರು. ಇದು ಮಾಮೂಲಾಗಿ ನಡೆಯುವಂಥದ್ದಲ್ಲ. ಬರಲಿರುವ ಪಂಜಾಬ್ ಮತ್ತು ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯುವುದರೊಂದಿಗೆ, 2024ರ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ಸನ್ನು ಸಜ್ಜುಗೊಳಿಸುವ 'ದೊಡ್ಡ ವಿಚಾರಗಳು' ನಿರ್ಧಾರವಾಗಿರಬಹುದು ಎನ್ನಲಾಗಿದೆ.
ಚುನಾವಣಾ ತಂತ್ರಗಾರರಾದ ಪ್ರಶಾಂತ್ ಕಿಶೋರ್ ಅವರನ್ನು ರಾಜಕೀಯ ಚಾಣಕ್ಯ ಎಂದೇ ಕರೆಯಲಾಗುತ್ತದೆ. ತಮ್ಮ ಸೇವೆಯನ್ನು ಪಡೆದ ಬಂಗಾಳದ ಟಿಎಂಸಿ ಮತ್ತು ತಮಿಳುನಾಡಿನ ಎಂ.ಕೆ.ಸ್ಟಾಲಿನ್ ಪಕ್ಷಕ್ಕೆ ಚುನಾವಣೆಯಲ್ಲಿ ಭಾರೀ ಗೆಲುವು ಲಭ್ಯವಾದ ಹಿನ್ನೆಲೆಯಲ್ಲಿ ಅವರ ಮೌಲ್ಯ ಹೆಚ್ಚಿದೆ. ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ನ ಮಾರ್ಗದರ್ಶಕರಾಗಿ ಕಿಶೋರ್ ಪ್ರಮುಖ ಪಾತ್ರ ವಹಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕು. (ಏಜೆನ್ಸೀಸ್)