

ಸೊರಬ: ಕಾರ್ತಿಕ ಮಾಸದ ಅಂಗವಾಗಿ ಶುಕ್ರವಾರ ತಾಲೂಕಿನ ಹಾಲಗಳಲೆ ಗ್ರಾಮದಲ್ಲಿ ಗ್ರಾಮದೇವತೆಗಳಿಗೆ ವರ್ಷತೊಡಕಿನ ವಿಶೇಷ ಪೂಜೆ ಸಲ್ಲಿಸಲಾಯಿತು.
ವರ್ಷಕ್ಕೊಮ್ಮೆ ಗ್ರಾಮದ ಸಮೀಪವಿರುವ ಕಾಡಿನಲ್ಲಿ ಗ್ರಾಮದೇವತೆ(ಗಾಮದಮ್ಮ) ಹಾಗೂ ಚೌಡಮ್ಮ ದೇವರಿಗೆ ವರ್ಷಕ್ಕೊಮ್ಮೆ ಗ್ರಾಮದವರಲ್ಲರೂ ಸೇರಿ ಪೂಜೆ ಸಲ್ಲಿಸುವುದು ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿದೆ. ಅದರಂತೆ ಪ್ರತಿ ವರ್ಷ ದೀಪಾವಳಿ ಇಲ್ಲವೇ ಕಾರ್ತಿಕ ಮಾಸದಲ್ಲಿ ಗ್ರಾಮದ ಎಲ್ಲರೂ ಸೇರಿ ಕಾಡಿನಲ್ಲಿರುವ ಗ್ರಾಮದೇವತೆ ಮತ್ತು ಚೌಡಮ್ಮಗೆ ಪೂಜೆಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ದೀಪಾವಳಿ ಹಬ್ಬದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಹಸಿರು ಎಲೆಗಳ ಚಪ್ಪರ ಕಟ್ಟಿ ಅಡಕೆ ಹಿಂಗಾರ, ಚೆಂಡೆ ಹೂವು, ಮಾವಿನ ಸೊಪ್ಪಿನಿಂದ ಹಾಗೂ ವಿವಿಧ ಹೂವುಗಳಿಂದ ಅಲಂಕೃತಗೊಳಿಸಿದ್ದರು. ವಿಶೇಷ ಪೂಜೆ ಸಲ್ಲಿಸಿ, ಮನೆಯಿಂದ ತೆಗೆದುಕೊಂಡು ಹೋದ ಬೆಲ್ಲ, ಸಕ್ಕರೆ ಮತ್ತು ಕಾಯಿನ್ನು ಪ್ರಸಾದ ರೂಪದಲ್ಲಿ ಹಂಚಿದರು. ನಂತರ ಗ್ರಾಮದ ಈಶ್ವರ, ಬಸವೇಶ್ವರ, ಮಾರಮ್ಮ, ವೀರಭದ್ರ ದೇವರು, ಚೌಡಮ್ಮ, ಭೂತಪ್ಪ ದೇವರುಗಳಿಗೆ ಪೂಜೆ ಸಲ್ಲಿಸಿದರು. ಪುರಾತನ ಕಲ್ಲಿನ ಮೇಲೆ ದೀಪಗಳನ್ನು ಹಚ್ಚಿ ಕಾರ್ತಿಕೋತ್ಸವದಲ್ಲಿ ತೊಡಗಿದರು.
ಗ್ರಾಮ ಸಮಿತಿ ಅಧ್ಯಕ್ಷ ಮುದ್ದಪ್ಪ ಹಂಡಿ, ಕಾರ್ಯದರ್ಶಿ ಎಲ್.ಸಿ.ನಾಗರಾಜ್, ಖಜಾಂಚಿ ದೇವೇಂದ್ರಪ್ಪ, ಸದಸ್ಯರಾದ ಮೇಘರಾಜ್ ಗೌಡ, ಸಿ.ಎಚ್.ಜ್ಞಾನೇಶ್, ಮುದ್ದಪ್ಪ ಇತರರಿದ್ದರು.