ಭಕ್ತಿಯಿಲ್ಲದ ಪೂಜೆ ನಿರರ್ಥಕ

sgr dasara (1)
ಸಾಗರದಲ್ಲಿ ಏರ್ಪಡಿಸಿದ್ದ ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ದಂಪತಿ ಪಾಲ್ಗೊಂಡಿದ್ದರು. ಗುರುಮೂರ್ತಿ ಹೆಗಡೆ, ಪ್ರಸನ್ನ ಹೆಗಡೆ ಕೆರೆಕೈ ಇತರರಿದ್ದರು.
Published on

ಸಾಗರ: ಭಕ್ತಿ ಭಾವವಿಲ್ಲದ ಅರ್ಚನೆಗೆ ಯಾವುದೇ ಫಲ ಇಲ್ಲ. ಶ್ರದ್ಧಾಭಕ್ತಿಯಿಂದ ಕೂಡಿದ ಪೂಜೆ ಮಾತ್ರ ಫಲ ನೀಡುತ್ತದೆ ಎಂದು ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಸಾಗರದಲ್ಲಿ ಬುಧವಾರ ಏರ್ಪಡಿಸಿದ್ದ ನವರಾತ್ರ ನಮಸ್ಯಾ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಪೂಜೆಯಲ್ಲಿ ದೇವರಿಗೆ ಎಷ್ಟು ವಸ್ತು ಸಮರ್ಪಿಸುತ್ತಿದ್ದೇವೆ ಎನ್ನುವುದಕ್ಕಿಂತ ಭಕ್ತಿಯಿಂದ ಪೂಜಿಸುವುದು ಮುಖ್ಯ. ಯಾರ ಕುರಿತು ಪೂಜಿಸುತ್ತೇವೋ ಆ ಕರುಣಾಮಯಿಯ ಕುರಿತು ನಮ್ಮ ಚಿತ್ತಭಿತ್ತಿಯಲ್ಲಿ ಭಾವನೆಯೇ ಇಲ್ಲದಿದ್ದರೆ ಆ ಪೂಜೆ ಪರಿಪೂರ್ಣವಲ್ಲ ಎಂದರು. ದೇವಿಯ ಪ್ರತಿ ಸ್ತೋತ್ರ ಹೇಳುವಾಗ ಸೃಷ್ಟಿಯ ನೆಮ್ಮದಿಗಾಗಿ ಆಕೆ ಮಾಡಿದ ಪ್ರತಿ ಕಾರ್ಯವೂ ನಮ್ಮ ಮನದಲ್ಲಿದ್ದರೆ ಅದನ್ನು ಸ್ಮರಿಸಿ ಧ್ಯಾನಿಸಿದರೆ ಮಾತ್ರ ಅನುಗ್ರಹ ದೊರೆಯಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪತ್ನಿ ಪ್ರೇಮಾ ಅವರೊಂದಿಗೆ ಆಗಮಿಸಿ ಲಲಿತಾದೇವಿ ಪೂಜೆಯಲ್ಲಿ ಪಾಲ್ಗೊಂಡರು. ಉಡಿ ಸಮರ್ಪಣೆ ಮಾಡಿ ಶ್ರೀಗಳಿಂದ ಆಶೀರ್ವಾದ ಪಡೆದರು. ಕಾರ್ಯಕ್ರಮದ ಪ್ರಮುಖರಾದ ಗುರುಮೂರ್ತಿ ಹೆಗಡೆ, ಪ್ರಸನ್ನ ಹೆಗಡೆ ಕೆರೆಕೈ, ಗುರುಪಾದ ಭೀಮನಕೋಣೆ, ಗೌತಮ, ಗಣೇಶ್‌ಪ್ರಸಾದ್, ಎಂ.ಜಿ.ರಾಮಚಂದ್ರ, ಅಶೋಕ್ ಇತರರಿದ್ದರು. ಬೆಳಗ್ಗೆ ಮಂತ್ರ ಹವನ, ಚಂಡಿಕಾ ಹವನ, ಶ್ರೀಪೂಜೆ, ಕುಂಕುಮಾರ್ಚನೆ, ಸ್ತೋತ್ರ ಸಮರ್ಪಣೆ, ಸುವರ್ಣ ಪಾದುಕಾ ಪೂಜೆ, ಭಜನೆ, ಲಲಿತಾ ಅಷ್ಟೋತ್ತರ ನಡೆಯಿತು. ಸಂಜೆ ದುರ್ಗಾದೀಪ ನಮಸ್ಕಾರ, ರಾಜರಾಜೇಶ್ವರಿ ಪೂಜೆ ಹಾಗೂ ಚಂಡಿಕಾ ಪಾರಾಯಣ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net