ಆ.8ರಿಂದ 12ರವರೆಗೆ ರಾಯರ ಆರಾಧನೆ

Published on

ಚನ್ನರಾಯಪಟ್ಟಣ: ಪಟ್ಟಣದ ಕೋಟೆಯಲ್ಲಿರುವ ಗುರುರಾಘವೇಂದ್ರ ಸ್ವಾಮಿಮಠದಲ್ಲಿ ಗುರುರಾಘವೇಂದ್ರ ಯತಿಗಳ 354ನೇ ಆರಾಧನಾ ಮಹೋತ್ಸವವು ಆ.8ರಿಂದ 12ರವರೆಗೆ ನಡೆಯಲಿದೆ ಎಂದು ಶ್ರೀಮಠದ ಅಧ್ಯಕ್ಷ ಸಿ.ವಿ.ರಾಜಪ್ಪ ತಿಳಿಸಿದರು.

ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರು, ಸಾರ್ವಜನಿಕರು, ರಾಜಕೀಯ ಮುಖಂಡರ ನೆರವಿನಿಂದ 40ವರ್ಷಗಳಿಂದ ಆಡಳಿತ ಮಂಡಳಿ ಮಠದ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದೆ. ಸುಸಜ್ಜಿತ ಭವನ ನಿರ್ಮಾಣ, ರಾಯರ ಮಂದಿರದ ಅಭಿವೃದ್ಧಿ ಸೇರಿ ಹತ್ತಾರು ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ಪೇಜಾವರ ಶ್ರೀಗಳು ಇಲ್ಲಿನ ಮಠದೊಂದಿಗೆ ಅವಿನಾಭವ ಸಂಬಂಧ ಹೊಂದಿದ್ದು, ಅವರ ಸಹಕಾರದಿಂದಲೇ ಇಷ್ಟೆಲ್ಲಾ ಅಭಿವೃದ್ಧಿಗಳು ಸಾಧ್ಯವಾಗಿವೆ ಎಂದರು.

ಮಠದ ಕಾರ್ಯದರ್ಶಿ ಸಿ.ಎನ್.ಪುಟ್ಟಸ್ವಾಮಿಗೌಡ ಮಾತನಾಡಿ, 354ನೇ ಆರಾಧನಾ ಮಹೋತ್ಸವದ ನಿಮಿತ್ತ ಶ್ರೀನಿಧಿ ಆಚಾರ್ಯರ ನೇತೃತ್ವದಲ್ಲಿ ಆ.8ರಂದು ಬೆಳಗ್ಗೆ 6.30ಕ್ಕೆ ಉಷಾಕಾಲ ಪೂಜೆ, ಪಂಚಾಮೃತ ಅಭಿಷೇಕ ನಂತರ ಮಹಾಮಂಗಳಾರತಿ. ಸಂಜೆ 6 ರಿಂದ 7.30ರವರೆಗೆ ವಿವೇಕ ಜಾಗೃತ ಬಳಗದವತಿಯಿಂದ ಭಜನಾ ಕಾರ್ಯಕ್ರಮ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರುತ್ತದೆ ಎಂದರು.

ಆ.9ರ ಶನಿವಾರ ಬೆಳಗ್ಗೆ 6.30ಕ್ಕೆ ಉಷಾಕಾಲ ಪೂಜೆ, ಪಂಚಾಮೃತ ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ಸಂಜೆ 4ಕ್ಕೆ ಗೋಪೂಜೆ, ಧಾನ್ಯಪೂಜೆ, ಧ್ವಜಾರೋಹಣ ಹಾಗೂ ಸಂಜೆ 6 ರಿಂದ 7.30ರವರೆಗೆ ವೆಂಕಟೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ರಾತ್ರಿ 7.30ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗವಿರುತ್ತದೆ.

ಆ.10ರ ಭಾನುವಾರ ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ 6.30ಕ್ಕೆ ಉಷಾಕಾಲ ಪೂಜೆ, ಪಂಚಾಮೃತ ಅಭಿಷೇಕ ನಂತರ ಪಾದಪೂಜೆ ಸೇವೆ, ಮಹಾಮಂಗಳಾರತಿ ನೆರವೇರಲಿದೆ. ಸಂಜೆ 4.30ರಿಂದ 8.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ, ನಂತರ ಡೋಲ್ ಯೋಗಾನರಸಿಂಹ ತೆಂಗಿನಭಾಗ ಮತ್ತು ಕುಮಾರಸ್ವಾಮಿ ವಗರಹಳ್ಳಿ, ತಂಡದವರಿಂದ ನಾದಸ್ವರ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾತ್ರಿ 7.30 ಕ್ಕೆ ಮಹಾಮಂಗಳಾರತಿ, ನಂತರ ತೀರ್ಥ ಪ್ರಸಾದ ವಿನಿಯೋಗ ಮಾಡಲಾಗುವುದು.

ಆ.11ರಂದು ಮಧ್ಯಾರಾಧನೆ, ಪಂಚಾಮೃತ ಅಭಿಷೇಕ ಮತ್ತು ಪಾದಪೂಜೆ ಮಧ್ಯಾಹ್ನ 12ಕ್ಕೆ ಅಲಂಕಾರ ಪಂಕ್ತಿಯ ಬ್ರಾಹ್ಮಣ ಪೂಜೆ ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನಸಂರ್ಪಣೆ ಏರ್ಪಡಿಸಲಾಗಿದೆ.

ಆ.12ರ ಉತ್ತರಾರಾಧನೆಯಂದು ಬೆಳಗ್ಗೆ 6.30 ಕ್ಕೆ ಉಷಾಕಾಲ ಪೂಜೆ, ಪಂಚಾಮೃತ ಅಭಿಷೇಕ ಮತ್ತು ಪಾದಪೂಜೆ ಹಾಗೂ 10.30 ರಿಂದ 12ಗಂಟೆವರೆಗೆ ರೇಣುಕಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಿರುತ್ತದೆ. ಸಂಜೆ 5.30 ರಿಂದ 7.30ರವರೆಗೆ ಕರ್ನಾಟಕ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸಿ.ಎನ್.ವೆಂಕಟೇಶ್ ಮತ್ತು ತಂಡದವರಿಂದ ಭಕ್ತಿಗೀತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸಂಜೆ 6.30ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಬೆಳ್ಳಿರಥದಲ್ಲಿ ಶ್ರೀ ಗುರುಸಾರ್ವಭೌಮರ ಉತ್ಸವ ನಡೆಸಲಾಗುತ್ತದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿಮಾಡಿದರು.

ಖಜಾಂಚಿ ಸಿ.ಎಂ.ರಾಘವೇಂದ್ರ, ನಿರ್ದೇಶಕ ಸಿ.ಜಿ.ರಾಜಪ್ಪ, ಸಿ.ಎನ್.ಆರ್.ಸುನಿಲ್, ಸಿ.ಎನ್.ದೀಪಕ್, ಸಿ.ಎನ್. ಹರ್ಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net