

ಹನಗೋಡು : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶುಕ್ರವಾರ ಹನಗೋಡು ಹೋಬಳಿಯ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.
ಬೆಳಗ್ಗೆಯಿಂದ ರಾತ್ರಿವರೆಗೂ ವಿಶೇಷ ಪೂಜೆ, ಮನರಂಜನಾ ಕಾರ್ಯಕ್ರಮಗಳು ನೆರೆವೇರಿದವು. ರಾಮೇನಹಳ್ಳಿಯ ಓಂಕಾರೇಶ್ವರ ಬೆಟ್ಟ, ಮಾದಳ್ಳಿಯ ಕಲ್ಲೂರೇಶ್ವರ ದೇಗುಲ, ಕೊಳುವಿಗೆಯ ರಾಮಲಿಂಗೇಶ್ವರ ದೇವಾಲಯ, ಹನಗೋಡಿನ ಬ್ರಾಹ್ಮಣರ ಬೀದಿಯ ಪವಮಾನ ಮಂದಿರ, ಶ್ರೀ ಅಂಜನೇಯ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯ, ಕಾಳಿಕಾದೇವಿ ದೇಗುಲ, ದೊಡ್ಡಹೆಜ್ಜೂರಿನ ವೀರಾಂಜನೇಯ ಸ್ವಾಮಿ, ನೇರಳಕುಪ್ಪೆಯ ಶ್ರೀ ಮಹಾಲಕ್ಷ್ಮೀ ದೇವಾಲಯ, ಹೆಬ್ಬಾಳದ ಓಂಕಾರೇಶ್ವರ ದೇವಾಲಯ, ಬಿ.ಆರ್ ಕಾವಲ್ ಬೋವಿ ಕಾಲನಿಯ ಶ್ರೀ ಶನಿದೇವರ ದೇಗುಲ, ತಟ್ಟೆಕೆರೆ-ಹೊಸಕೊಟೆಯ ಶ್ರೀ ವೀರಾಂಜನೇ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಎಲ್ಲ ದೇವಾಲಯಗಳಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
ರಥೋತ್ಸವ ಇಂದು : ಹನಗೋಡು ರಸ್ತೆಯ ರಾಮೇನಹಳ್ಳಿ ಬೆಟ್ಟದ ಮೇಲಿನ ಶ್ರೀ ಓಂಕಾರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.9 ರಂದು ಬೆಳಗ್ಗೆ 9 ಗಂಟೆಗೆ ಬೆಟ್ಟದ ತಪ್ಪಲಿನಲ್ಲಿ ಓಂಕಾರೇಶ್ವರಸ್ವಾಮಿಯ ರಥೋತ್ಸವ ನಡೆಯಲಿದೆ. ಮಧ್ಯಾಹ್ನ 12 ರಿಂದ ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಮಾ.10 ರಂದು ಸಂಜೆ ಪಾರಟೋತ್ಸವ, ಮಾ.11ರಂದು ಸಂಜೆ 5ಗಂಟೆಗೆ ರಾಮೇನಹಳ್ಳಿಯಲ್ಲಿ ದೇವರ ಪಲ್ಲಕ್ಕಿ ಉತ್ಸವ, ಲಕ್ಷಣತೀರ್ಥ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ.