ಉತ್ತರ ಕರ್ನಾಟಕದಲ್ಲಿ ವಿಶಿಷ್ಟ ಸಂಪ್ರದಾಯ: ಬಲಿಪಾಡ್ಯಮಿಯಂದು ಸಗಣಿಯಿಂದ ಪಾಂಡವರ ಮೂರ್ತಿ ಮಾಡಿ ಪೂಜೆ | Pandava Pooje

 North Karnataka Pandava Pooje
ಉತ್ತರ ಕರ್ನಾಟಕದಲ್ಲಿ ಸಂಭ್ರಮದ ಬಲಿಪಾಡ್ಯಮಿ ಆಚರಣೆ
Published on: 
Summary
  • ಬಲಿಪಾಡ್ಯಮಿಯಂದು ಸಗಣಿ ಪಾಂಡವರ ಪ್ರತಿಷ್ಠಾಪನೆ ಹಾಗೂ ಗೋಪೂಜೆ

  • ಕೃಷಿ, ಗೋಸಂಪತ್ತಿನ ಸಮೃದ್ಧಿಗಾಗಿ ಮಹಾಭಾರತ ಕಾಲದಿಂದಲೂ ನಡೆದುಬಂದ ಆಚರಣೆ

  • ಸಗಣಿಯ ಪಾಂಡವರಿಗೆ ಉತ್ತರಾಣಿ ಕಡ್ಡಿ, ಹೂವುಗಳಿಂದ ಅಲಂಕಾರ ಮಾಡಿ ಹೋಳಿಗೆ ನೈವೇದ್ಯ

Balipadyami: ಬೆಳಕಿನ ಹಬ್ಬ ದೀಪಾವಳಿಯ ಮೂರನೇ ದಿನವಾದ ಬಲಿಪಾಡ್ಯಮಿಯನ್ನು ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ದಿನ ಹಸುವಿನ ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ತಯಾರಿಸಿ, ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವುದು ಈ ಹಬ್ಬದ ಮುಖ್ಯ ಆಕರ್ಷಣೆಯಾಗಿದೆ.

ಎರಡನೇ ದಿನದ ದೀಪಾವಳಿ ಅಮವಾಸ್ಯೆಯಂದು ಗ್ರಾಮೀಣ ಪ್ರದೇಶದ ಮನೆ ಹಾಗೂ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ವಿಜೃಂಭಣೆಯಿಂದ ನಡೆದಿದ್ದು, ಮಂಗಳವಾರ ಬಲಿಪಾಡ್ಯಮಿ ಹಿನ್ನೆಲೆಯಲ್ಲಿ ಸಗಣಿಯಿಂದ ಡವರ ಮೂರ್ತಿ ತಯಾರಿಸಿಸಲು ಸಗಣಿ ಸಂಗ್ರಹಿಸುತ್ತಾರೆ.

ಪಾಂಡವರ ಪ್ರತಿಷ್ಠಾಪನೆಯ ಹಿನ್ನೆಲೆ

ಮಹಾಭಾರತ ಯುದ್ಧದ ನಂತರ ಪಾಂಡವರು ಕೃಷಿ ಮತ್ತು ಗೋಸಂಪತ್ತಿನ ಅಭಿವೃದ್ಧಿಗಾಗಿ ಗೋಪೂಜೆ ಹಾಗೂ ಕೃಷಿ ಆರಾಧನೆಗೆ ಹೆಚ್ಚಿನ ಮಹತ್ವ ನೀಡಿದ್ದರು. ಈ ನಂಬಿಕೆಯ ಹಿನ್ನೆಲೆಯಲ್ಲಿ ಪಾರಂಪರಿಕವಾಗಿ ಪಾಂಡವರ ಪೂಜೆ ನಡೆದುಕೊಂಡು ಬಂದಿದ್ದು, ರೈತಾಪಿ ವರ್ಗಕ್ಕೆ ಇದು ಸಮೃದ್ಧಿಯ ಸಂಕೇತವಾಗಿದೆ.

ಆಚರಣೆಯ ವಿಶಿಷ್ಟ ವಿಧಾನ

ಬಲಿಪಾಡ್ಯಮಿಯ ಮುಂಜಾನೆ ರೈತರು ತಮ್ಮ ದನಗಳ ಹಟ್ಟಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತಾರೆ. ನರಕ ಚತುರ್ದಶಿಯಿಂದ ಬಲಿಪಾಡ್ಯಮಿಯವರೆಗೆ ಬೆಳಿಗ್ಗೆ ಬೇಗನೆ ಎದ್ದು ದನದ ಕೊಟ್ಟಡಿಯಲ್ಲಿ ಅಥವಾ ಮನೆಯ ಅಂಗಳದಲ್ಲಿ ಹಸುವಿನ ಸಗಣಿಯಿಂದ ಐದು ಪಾಂಡವರು ಹಾಗೂ ದ್ರೌಪದಿಯ ಆಕೃತಿಗಳನ್ನು ಸಣ್ಣ ಗೋಪುರಗಳಂತೆ ಸಿದ್ಧಪಡಿಸುತ್ತಾರೆ.

ಕಾಡು ಹೂಗಳಿಂದ ಪಾಂಡವರ ಪೂಜೆ

ಈ ಮೂರ್ತಿಗಳಿಗೆ ಉತ್ತರಾಣಿ ಕಡ್ಡಿ, ಹೊನ್ನಂಬರದ ಹೂವು ಮತ್ತು ವಿವಿಧ ಕಾಡು ಹೂಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗುತ್ತದೆ. ನಂತರ ಸಗಣಿ ಪಾಂಡವರಿಗೆ ಹಾಗೂ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಳಿಗೆಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಪೂಜೆ ಮುಗಿದ ನಂತರ ಈ ಸಗಣಿ ಮೂರ್ತಿಗಳನ್ನು ಮನೆಯ ಮಾಳಿಗೆಯ ಮೇಲೆ ಇಡುವ ಪರಿಪಾಠವಿದೆ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವುದು ಬೆಕ್ಕಾ ಅಥವಾ ಹಂದಿನಾ? ಜೀನಿಯಸ್​ ಮಾತ್ರ ಪತ್ತೆಹಚ್ಚಬಲ್ಲರು! Optical illusion challenge

ದುಷ್ಟ ಶಕ್ತಿಗಳು ದೂರವಾಗಿ ಮನೆಗೆ ಸುಖ, ಶಾಂತಿ, ಸಮೃದ್ಧಿ ಸಿಗಲಿ ಹಾಗೂ ದನಕರುಗಳ ಆರೋಗ್ಯ ಚೆನ್ನಾಗಿರಲಿ ಎಂಬ ನಂಬಿಕೆಯಿಂದ ಈ ಪೂಜೆ ನೆರವೇರಿಸಲಾಗುತ್ತದೆ. ಲಿಂಗಾಯತ, ಒಕ್ಕಲಿಗ, ನೇಕಾರ, ಬ್ರಾಹ್ಮಣ ಹಾಗೂ ಬಂಜಾರ ಸೇರಿದಂತೆ ವಿವಿಧ ಸಮುದಾಯಗಳ ಜನರು ಈ ಸಂಪ್ರದಾಯವನ್ನು ಆಚರಿಸುತ್ತಾರೆ. ವಿಶೇಷವಾಗಿ ಬಂಜಾರ ಸಮುದಾಯದವರು ದೀಪಾವಳಿ ಸಮಯದಲ್ಲಿ ಸಗಣಿಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕೆಯಿಂದ ಅದನ್ನು ಹೊರಗೆ ಚೆಲ್ಲುವುದಿಲ್ಲ.