ಪುತ್ತಿಗೆ ಮಠದಲ್ಲಿ ತ್ಯಾಗರಾಜ, ಪುರಂದರದಾಸರ ಆರಾಧನಾ ಸಂಗೀತೋತ್ಸವ, ಹಿರಿಯ ವಿದ್ವಾಂಸರಿಗೆ ಸನ್ಮಾನ

Vishwesha
Published on

ಬೆಂಗಳೂರು ಸಾಮಾಜಿಕ ಶಾಂತಿ ಮತ್ತು ಸೌಹಾರ್ದಕ್ಕೆ ಶಾಸ್ತ್ರೀಯ ಸಂಗೀತ ಕೊಡುಗೆ ಅನನ್ಯ ಎಂದು ಭಂಡಾರಕೇರಿ ಮಹಾಸಂಸ್ಥಾನ ಮಠದ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.

ಬಸವನಗುಡಿಯ ಪುತ್ತಿಗೆ ಮಠದ ಸಭಾಂಗದಲ್ಲಿ ಅನುಗ್ರಹ ಸಂಗೀತ ಮಹಾವಿದ್ಯಾಲಯ ಭಾನುವಾರ ಹಮ್ಮಿಕೊಂಡಿದ್ದ ತ್ಯಾಗರಾಜ ಮತ್ತು ಪುರಂದರದಾಸರ ಆರಾಧನಾ ಸಂಗೀತೋತ್ಸವದಲ್ಲಿ ಹರಿದಾಸರ ಪ್ರಚಲಿತ ದೇವರನಾಮಗಳ ಪುಸ್ತಕ ಭಕ್ತಿ ಸನ್ನುತಿ- ಭಾಗ 2 ಲೋಕಾರ್ಪಣೆಗೊಳಿಸಿ ಆಶೀರ್ವಚನ ಸಂದೇಶ ನೀಡಿದರು.

ಯಾವ ದೇಶದಲ್ಲಿ ಸಂಗೀತ ಮತ್ತು ಸಾಹಿತ್ಯಗಳು ಸಮೃದ್ಧವಾಗಿರುತ್ತವೆಯೋ ಅಲ್ಲಿ ಸುಭಿಕ್ಷೆ ನೆಲೆಸಿರುತ್ತದೆ. ಈ ರಂಗದ ವಿದ್ವಾಂಸರು, ತಜ್ಞರನ್ನು ಗೌರವಿಸುವುದು, ಆದರಿಸುವುದು ಒಂದು ಶ್ರೇಷ್ಠ ಕಾರ್ಯವೇ ಆಗಿದೆ ಎಂದರು.

ಬಹುಮುಖೀ ಸೇವೆ:

ಸಂಗೀತ ಪಾಠ, ಉಚಿತ ಶಿಬಿರ, ಆರಾಧನಾ ಉತ್ಸವ, ಸಂಕೀರ್ತನೆ ಸೇರಿ ಇತರೆ ಚಟುವಟಿಕೆಗಳೊಂದಿಗೆ ಕೃತಿ ಬಿಡುಗಡೆ ಮಾಡುತ್ತಿರುವುದು ಮಾದರಿಯಾಗಿದೆ. ಒಂದು ಸಂಸ್ಥೆ ಒಂದು ಸೇವೆ ಮಾಡುವುದು ಸಹಜ. ಆದರೆ ವಿದ್ವಾನ್ ಶ್ರೀಕಂಠ ಭಟ್ಟರ ನೇತೃತ್ವದ ಈ ಸಂಸ್ಥೆ ಬಹುಮುಖಿ ಸೇವೆಯಲ್ಲಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್ ಮಾತನಾಡಿ, ಹತ್ತಾರು ದಶಕದಿಂದ ಸಾಧನೆ ಮಾಡಿದವರನ್ನು ಇಂದು ವಿದ್ಯಾಲಯ ಗೌರವಿಸಿದೆ. ಜ್ಞಾನಿಗಳನ್ನು ಸನ್ಮಾನಿಸಿದರೆ ಸಮಾಜದಲ್ಲಿ ಇನ್ನಷ್ಟು ಶ್ರೇಷ್ಠ ಕೆಲಸಗಳಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದರು.

ಸಂಗೀತ ಸಮಾರಾಧನೆ:

ಆರಾಧನಾ ಮಹೋತ್ಸವದ ಅಂಗವಾಗಿ ವಿದ್ಯಾಲಯದ ಕಿರಿಯ ವಿದ್ಯಾರ್ಥಿಗಳಿಂದ ಹರಿದಾಸರ ದೇವರನಾಮ ಗೋಷ್ಠಿ , ಹಿರಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಗಾಯನ ಪ್ರಸ್ತುತಪಡಿಸಲಾಯಿತು.

ರಾಜ್ಯದ ಹಿರಿಯ ಮೃದಂಗ ವಿದ್ವಾಂಸ ಎಚ್.ಎಸ್. ಸುಧೀಂದ್ರ, ಖ್ಯಾತ ತಬಲಾ ವಾದಕ ಪಂಡಿತ್ ಗುರುಮೂರ್ತಿ ವೈದ್ಯ, ಪಂಡಿತ ಪವಮಾನಾಚಾರ್ಯ ಕಲ್ಲಾಪುರ ಅವರನ್ನು ವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು. ಪ್ರಾಚಾರ್ಯ ವಿದ್ವಾನ್ ಶ್ರೀಕಂಠ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net