

ಶಿವಮೊಗ್ಗ: ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಮಂಗಳವಾರ ಜಿಲ್ಲೆಯ ವಿವಿಧೆಡೆ ಉತ್ತರಾರಾಧನೆ ಹಾಗೂ ಮಹಾ ರಥೋತ್ಸವದೊಂದಿಗೆ ಸಂಪನ್ನಗೊಂಡಿತು. ಆರಾಧನೆಯ ಅಂತಿಮ ದಿನವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಲಾಯಿತು.
ಶಿವಮೊಗ್ಗ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಗ್ಗೆಯಿಂದಲೇ ರಾಯರಿಗೆ ಅಷ್ಟೋತ್ತರ ಅಭಿಷೇಕ, ಉಯ್ಯಲೆ ಸೇವೆ, ಸರ್ವ ಸೇವೆ, ಮಹಾ ಪೂಜೆ, ಬೆಳ್ಳಿ ರಥೋತ್ಸವ ಸೇವೆ, ಅಷ್ಟಾವಧಾನ ಸೇವೆಗಳು ನೆರವೇರಿದವು. ಮಹಾ ರಥೋತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡು ತೇರನ್ನೆಳೆದು ಧನ್ಯತಾಭಾವ ಹೊಂದಿದರು. ರಾಯರ ಆರಾಧನೆ ಪ್ರಯುಕ್ತ ವಿವಿಧ ಭಜನಾ ತಂಡಗಳು ಹಾಗೂ ಭಕ್ತಾದಿಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಾವಿರಾರು ಭಕ್ತರು ರಾಯರ ದರ್ಶನ ಪಡೆದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಲಕ್ ನಗರದ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಠದ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಶಿವಮೊಗ್ಗದ ಕೆ.ಆರ್.ಪುರಂ, ಮಂಜುನಾಥ ಬಡಾವಣೆಯ ರಾಯರ ಮಠ ಹಾಗೂ ಪಲ್ಲಕ್ಕಿ ರಾಯರ ಮಠದಲ್ಲೂ ಅನೇಕ ಧಾರ್ಮಿಕ ಕಾರ್ಯಕ್ರಮ ನೆರವೇರಿದವು.