

ಸೊರಬ: ಹೊಸ್ತಿಲ ಹುಣ್ಣಿಮೆ ನಿಮಿತ್ತ ಚಂದ್ರಗುತ್ತಿ ರೇಣುಕಾಂಬಾ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸೊರಬ, ಹರಿಹರ, ಹಾವೇರಿ, ಹಾನಗಲ್, ಶಿವಮೊಗ್ಗ, ಚಿತ್ರದುರ್ಗ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಚಿಕ್ಕಮಗಳೂರು ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹುಣ್ಣಿಮೆ ನಿಮಿತ್ತ ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ಹಾಗೂ ತೊಟ್ಟಿಲು ಬಾವಿಗೆ ಭಕ್ತರು ಪೂಜೆ ಸಲ್ಲಿಸಿದರು. ದೇವಿ ಹೆಸರಿನಲ್ಲಿ ಪಡ್ಲಿಗೆ ತುಂಬಿಸುವುದು, ಮುಡಿ ನೀಡುವುದು, ಕಿವಿ ಚುಚ್ಚಿಸುವುದು ಮುಂತಾದ ಸೇವೆ, ಹರಕೆಗಳನ್ನು ತೀರಿಸಿದರು.
ರೇಣುಕಾಂಬಾ ದೇವಿ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ವಾದ್ಯ ಮೇಳಗಳೊಂದಿಗೆ ಆರಂಭವಾಗಿ ಗ್ರಾಮದ ಮಂಗಳಾರತಿ ಕಟ್ಟೆ, ಮುಖ್ಯ ರಸ್ತೆ ಮಾರ್ಗವಾಗಿ ದೇಗುಲದವರೆಗೆ ಜರುಗಿತು.