ಸಂಪಾದಕೀಯ: ಆತಂಕದ ಸಂಗತಿ

2-688122a33795a
Published on

ಮಾಹಿತಿ ಮತ್ತು ತಂತ್ರಜ್ಞಾನ ಬದುಕಿನ ವೇಗವನ್ನು ಹೆಚ್ಚಿಸಿದೆ, ಜೀವನಶೈಲಿಯನ್ನು ಸುಲಭವಾಗಿಸಿದೆ, ಸೌಲಭ್ಯಗಳು ಬೆರಳತುದಿಯಲ್ಲಿ ಸಿಗುವಂತಾಗಿದೆ ಎಂಬುದೇನೋ ನಿಜ. ಆದರೆ, ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ವ್ಯಾಪಕ ದುರುಪಯೋಗ ಮತ್ತು ವಂಚನೆ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ.

ಸೈಬರ್ ವಂಚನೆಯ ಪ್ರಕರಣಗಳಲ್ಲಿ ನಾಗರಿಕರು 2024ರ ಒಂದೇ ವರ್ಷದಲ್ಲಿ 22,845.73 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಕಳೆದುಕೊಂಡಿದ್ದಾರೆ ಎಂಬುದು ಆತಂಕದ ಸಂಗತಿ. 2023ರಲ್ಲಿ 7,465.18 ಕೋಟಿ ರೂ.ಗಳಷ್ಟು ವಂಚನೆಯಾಗಿತ್ತು ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದೆ. ರಾಷ್ಟ್ರೀಯ ಸೈಬರ್ ಅಪರಾಧ ದಾಖಲಿಸುವ ಪೋರ್ಟಲ್​ನಲ್ಲಿ 2023ರಲ್ಲಿ 1.31 ಕೋಟಿ ದೂರುಗಳು ದಾಖಲಾಗಿದ್ದರೆ, 2024ರ ಸಾಲಿನಲ್ಲಿ 1.91 ಕೋಟಿ ದೂರುಗಳು ದಾಖಲಾಗಿರುವುದು ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿ.

ಸೈಬರ್ ವಂಚನೆಯ ಅದರಲ್ಲೂ ಡಿಜಿಟಲ್ ಆರ್ಥಿಕ ವಂಚನೆಯ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಇದರ ಪರಿಹಾರಕ್ಕಾಗಿ ಸೂಕ್ತ ವ್ಯವಸ್ಥೆ ರೂಪಿಸಬೇಕಿದೆ. ಜನರು ಶ್ರಮದಿಂದ ದುಡಿದ ದುಡ್ಡು, ಭವಿಷ್ಯಕ್ಕಾಗಿ ಎಂದು ಜೋಡಿಸಿಟ್ಟ ಹಣ ಹೀಗೆ ಸೈಬರ್ ವಂಚಕರ ಪಾಲಾಗುತ್ತಿರುವುದು ಬ್ಯಾಂಕಿಂಗ್ ವಲಯದ ಸುರಕ್ಷತೆ ನಿಟ್ಟಿನಲ್ಲಿ ಅಪಾಯಕಾರಿ ಎಂಬುದನ್ನು ಅರಿಯಬೇಕಿದೆ. ಬ್ಯಾಂಕ್​ಗಳ ಅಸಲಿ ಇ-ಮೇಲ್ ಮತ್ತು ಸಂದೇಶಗಳಿಗೆ ಹೋಲುವಂತೆ ಸ್ಮಾರ್ಟ್ ಆಗಿ ನಕಲು ಮಾಡುವ ವಂಚಕರು, ಯಾವುದೋ ಒಂದು ಲಿಂಕ್ ಅಥವಾ ಒಟಿಪಿ ಮೂಲಕ ಹಣವನ್ನು ಲಪಟಾಯಿಸುತ್ತಿದ್ದಾರೆ. ಹಿರಿಯ ನಾಗರಿಕರು ಮಾತ್ರವಲ್ಲದೆ ಮಧ್ಯವಯಸ್ಕರು ಕೂಡ ಗೊತ್ತಿಲ್ಲದೇ ವಂಚಕರ ಜಾಲದಲ್ಲಿ ಸಿಲುಕಿ ಹಾಕಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಅಂತೇನಿಲ್ಲ.

ಸೈಬರ್ ಕ್ರಿಮಿನಲ್​ಗಳ 9.42 ಲಕ್ಷಕ್ಕಿಂತ ಹೆಚ್ಚು ಸಿಮ್ ಕಾರ್ಡ್​ ​ಗಳನ್ನು ಮತ್ತು 2,63,348 ಐಎಂಇಐಗಳನ್ನು ನಿರ್ಬಂಧಿಸಲಾಗಿದೆ. 17.82 ಲಕ್ಷಕ್ಕಿಂತ ಹೆಚ್ಚು ದೂರುಗಳಲ್ಲಿ 5,489 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಉಳಿಸಲಾಗಿದೆ. ಅಲ್ಲದೆ, ವಂಚನೆಯಿಂದ ಪಾರಾಗಲು ಸಹಾಯವಾಣಿಯನ್ನೂ ಸ್ಥಾಪಿಸಲಾಗಿದೆ (1930). ಆದರೆ, ವಂಚಕರು ಹೊಸ ಹೊಸ ದಾರಿಗಳನ್ನು ಕಂಡುಕೊಂಡು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ವಿದೇಶದಲ್ಲಿ ಇಂಥ ವಂಚಕರ ಹಲವು ಜಾಲಗಳೇ ಸಕ್ರಿಯವಾಗಿವೆ. ಹಾಗಾಗಿ, ಆ ದೇಶಗಳಲ್ಲಿ ತನಿಖೆ ನಡೆಸಲು ಮತ್ತು ಅಪರಾಧಿಗಳ ಹೆಡೆಮುರಿ ಕಟ್ಟಲು ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ.

ಡಿಜಿಟಲ್ ವಂಚನೆ ಕೇವಲ ಭಾರತಕ್ಕೆ ಕಾಡುತ್ತಿರುವ ಸಮಸ್ಯೆಯಲ್ಲ. ಇದು ಜಾಗತಿಕವಾಗಿ ಹಬ್ಬಿದ್ದು, ಪರಿಣಾಮಕಾರಿ ಪರಿಹಾರದ ಮಾರ್ಗಗಳನ್ನು ಶೋಧಿಸಿ, ಜಾರಿಗೆ ತರಬೇಕಿದೆ. ನಮ್ಮ ಪೊಲೀಸ್ ಇಲಾಖೆಯನ್ನೂ ಇಂಥ ಪ್ರಕರಣಗಳ ತನಿಖೆ ನಿಟ್ಟಿನಲ್ಲಿ ಆಧುನೀಕರಣಗೊಳಿಸುವ ಜತೆಗೆ ಸೂಕ್ತ ತರಬೇತಿಯನ್ನು ನೀಡಬೇಕಿದೆ. ಏಕೆಂದರೆ, ಹಲವೆಡೆ ಪೊಲೀಸರೇ ಡಿಜಿಟಲ್ ವಂಚನೆಗೆ ಒಳಗಾಗಿರುವ ನಿದರ್ಶನಗಳಿವೆ. ಒಟ್ಟಾರೆ, ಹೆಚ್ಚುತ್ತಿರುವ ಈ ಪಿಡುಗನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಮತ್ತು ಸಹಾಯವಾಣಿಯನ್ನು ಹೊರತುಪಡಿಸಿ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಇನ್ನಷ್ಟು ಸುರಕ್ಷಿತಗೊಳಿಸುವ, ಗ್ರಾಹಕರಿಗೆ ಹಾನಿಯುಂಟು ಮಾಡದ ವಹಿವಾಟನ್ನು ಒದಗಿಸುವಂಥ ಜವಾಬ್ದಾರಿ ಸಂಬಂಧಪಟ್ಟವರ ಮೇಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net