2021ಕ್ಕೆ ಜಗತ್ತಿನಾದ್ಯಂತ 15 ಕೋಟಿ ಜನಕ್ಕೆ ಕಡುಬಡತನ

World Bank
Published on

ವಾಷಿಂಗ್ಟನ್: ಜಗತ್ತಿನಾದ್ಯಂತ ಕರೊನಾ ಸೋಂಕಿನಿಂದಾಗಿ ಕಡುಬಡವರ ಸಂಖ್ಯೆ 2021ರ ವೇಳೆಗೆ 15 ಕೋಟಿ ದಾಟುವ ಸಾಧ್ಯತೆಯಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆ ನೀಡಿದೆ. ಎಲ್ಲ ದೇಶಗಳು ಆರ್ಥಿಕತೆಯನ್ನು ಉತ್ತಮವಾಗಿ ನಿರ್ವಹಣೆ ಮಾಡುವ ಅವಶ್ಯಕತೆ ಇದೆ ಎಂದು ತಿಳಿಸಲಾಗಿದೆ.

ವಿಶ್ವದಲ್ಲಿ ಶೇ. 82 ದೇಶಗಳು ಮಧ್ಯಮ ಆರ್ಥಿಕತೆಯನ್ನು ಹೊಂದಿವೆ. ಈ ದೇಶಗಳಲ್ಲಿ ಸಾಕಷ್ಟು ಜನರು ಬಡತನ ರೇಖೆಗಿಂತ ಕೆಳಗಿಳಿಯಲಿದ್ದಾರೆ. ಮುಂದಿನ ಒಂದು ವರ್ಷದಲ್ಲಿ ಜಗತ್ತಿನ ಶೇ. 1.4 ಜನರು ತೀವ್ರ ಬಡತನಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ. 1998ರ ನಂತರ ಮೊದಲ ಬಾರಿಗೆ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ 4-6 ಕೋಟಿ ಜನರು ಹೊಸದಾಗಿ ತೀವ್ರ ಬಡತನದ ಸುಳಿಗೆ ಸಿಲುಕಲಿದ್ದಾರೆ. ಮುಂದಿನ ವರ್ಷಕ್ಕೆ ಈ ಸಂಖ್ಯೆ 8.8 ಕೋಟಿಯಿಂದ 11.5 ಕೋಟಿಯವರೆಗೆ ಹೆಚ್ಚಲಿದೆ. 2021ಕ್ಕೆ ಒಟ್ಟಾರೆಯಾಗಿ 15 ಕೋಟಿ ಜನರು ತೀವ್ರ ಬಡತನದಲ್ಲಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.

ಕರೊನಾ ಪ್ರಕರಣ ಇನ್ನಷ್ಟು ಇಳಿಕೆ: ಭಾರತದಲ್ಲಿ ಮಂಗಳವಾರ 82 ಸಾವಿರಕ್ಕೂ ಅಧಿಕ ಮಂದಿ ಕರೊನಾದಿಂದ ಗುಣಮುಖರಾಗಿದ್ದು, ಒಟ್ಟಾರೆ ಗುಣಮುಖರ ಸಂಖ್ಯೆ 57.44 ಲಕ್ಷಕ್ಕೂ ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9.07 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ. 84.70ಗೆ ಏರಿಕೆಯಾಗಿದೆ. 72 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 67.57 ಲಕ್ಷ ದಾಟಿದೆ. ಮೃತರ ಸಂಖ್ಯೆ 1.04 ಲಕ್ಷ ಮೀರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 25 ರಾಜ್ಯಗಳಲ್ಲಿ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಒಂದೇ ದಿನದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಶೇ. 75 ಪಾಲನ್ನು 10 ರಾಜ್ಯಗಳು ಪಡೆದಿವೆ. ಸಕ್ರಿಯ ಪ್ರಕರಣ ಗಳಲ್ಲಿ ಶೇ. 77 ಪಾಲು ಈ ರಾಜ್ಯಗಳದ್ದಾಗಿದೆ ಎಂದು ತಿಳಿಸಲಾಗಿದೆ.

  1. ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಗುರುವಾರದಿಂದ ಜಾಗೃತಿ ಅಭಿಯಾನವನ್ನು ಆರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
  2. ಕೇರಳದಲ್ಲಿ ಬುಧವಾರ 10,600ಕ್ಕೂ ಹೆಚ್ಚು ಕರೊನಾ ಪ್ರಕರಣ ಗಳು ದೃಢವಾಗಿವೆ. ಇದು ರಾಜ್ಯದಲ್ಲಿ ಈವರೆಗಿನ ಗರಿಷ್ಠ ದಾಖಲೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net