ಮನೆಯಿಂದ ಹೊರಗೆ ಬರಲು ಒಬ್ಬರಿಗೆ ಮಾತ್ರ ಅವಕಾಶ; ಅತ್ಯಂತ ಕಠಿಣ ಲಾಕ್​ಡೌನ್​ ಜಾರಿ

lockdown
Published on

ಅಡಿಲೇಡ್​: ಭಾರತದಲ್ಲಿ ಕರೊನಾ ಸೋಂಕಿನ ಅಬ್ಬರ ಬಹುತೇಕ ಕಡಿಮೆಯಾಗಿದೆ. ಇನ್ನು ಕೆಲ ದಿನಗಳಲ್ಲಿ ಸೋಂಕಿನ ಎರಡನೇ ಅಲೆ ಆರಂಭವಾಗಬಹುದು ಎನ್ನುವ ಭಯವೂ ಕಾಡಲಾರಂಭಿಸಿದೆ. ಆದರೆ ಕೆಲ ದೇಶಗಳಲ್ಲಿ ಮಾತ್ರ ಸೋಂಕಿನ ಅಬ್ಬರ ಹೆಚ್ಚಲಾರಂಭಿಸಿದೆ. ಅದೇ ಹಿನ್ನೆಲೆಯಲ್ಲಿ ಯುರೋಪಿಯನ್​ ದೇಶಗಳು ಸೇರಿ ಅನೇಕ ದೇಶಗಳಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿದೆ.

ಆರು ದಿನಗಳ ಕಾಲ ಕಠಿಣ ಲಾಕ್​ಡೌನ್​. ಅಗತ್ಯ ಕೆಲಸಗಳಿಗೆ ಪ್ರತಿ ಮನೆಯಿಂದ ಒಬ್ಬರಿಗೆ ಮಾತ್ರ ಹೊರಬರಲು ಅವಕಾಶ. ನಾಯಿಯನ್ನು ವಾಕಿಂಗ್​ ಕೂಡ ಕರೆದುಕೊಂಡು ಹೋಗುವಂತಿಲ್ಲ. ಶಾಲೆ, ಕಾಲೇಜು, ಕೆಫೆ ಎಲ್ಲವೂ ಬಂದ್​. ಮದುವೆ, ಸಮಾರಂಭ, ಸಭೆಗಳಿಗೆ ಸಂಪೂರ್ಣ ಬ್ರೇಕ್​. ಇದು ದಕ್ಷಿಣ ಆಸ್ಟ್ರೇಲಿಯಾದ ಲಾಕ್​ಡೌನ್​ನ ನಿಯಮಗಳು. ಒಮ್ಮೆ ಕರೊನಾ ಸೋಂಕನ್ನು ಗೆದ್ದಿದ್ದ ದೇಶದಲ್ಲಿ ಇದೀಗ ಮತ್ತೊಮ್ಮೆ ಸೋಂಕು ಹೆಚ್ಚುತ್ತಿದೆ. ಆ ಹಿನ್ನೆಲೆಯಲ್ಲಿ ನವೆಂಬರ್​ 19ರಿಂದ ಆರು ದಿನಗಳ ಕಾಲ ಲಾಕ್​ಡೌನ್​ ಘೋಷಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

ಅಡಿಲೇಡ್​ನ ಹೋಟೆಲ್​ ಒಂದರಲ್ಲಿ 23 ಜನರಿಗೆ ಸೋಂಕು ದೃಢವಾಗಿದೆ. ಇವರಲ್ಲಿ ಬಹುತೇಕರಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಲಕ್ಷಣರಹಿತವಾಗಿ ಸೋಂಕು ಹರಡುತ್ತಿರುವುದು ಕಠಿಣ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿದೆ. ಕಠಿಣ ನಿರ್ಧಾರಗಳ ಜಾರಿಯಿಂದಾಗಿ ಆದಷ್ಟು ಬೇಗ ಸೋಂಕನ್ನು ನಿಯಂತ್ರಿಸುವುದಾಗಿ ಸರ್ಕಾರ ಹೇಳಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net