

ಪ್ರತಿ ವರ್ಷ ಅ. 21ರಂದು ಜಾಗತಿಕ ಅಯೋಡಿನ್ ಕೊರತೆ ಅಸ್ವಸ್ಥತೆ ತಡೆಗಟ್ಟುವಿಕೆ ದಿನ ಎಂದು ಆಚರಿಸಲಾಗುತ್ತದೆ. ಅಯೋಡಿನ್ ಕೊರತೆಯಿಂದಾಗುವ ಆರೋಗ್ಯ ಸಮಸ್ಯೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ.
| ಡಾ. ದ್ರಾಕ್ಷಾಯಿಣಿ ಸಿ.ಎಲ್., ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ, ಶಿವಮೊಗ್ಗ
ಅಡುಗೆಗೆ ಒಂದು ಪದಾರ್ಥ ಹೆಚ್ಚು ಕಡಿಮೆಯಾದರೆ ಅದರ ರುಚಿ ಹೇಗೆ ಕೆಡುತ್ತದೆಯೋ ಅದೇ ರೀತಿ ಆಹಾರದಲ್ಲಿ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಮನುಷ್ಯನ ಆರೋಗ್ಯ ಕೆಡುತ್ತದೆ. ಇಂತಹ ಪದಾರ್ಥಗಳಲ್ಲಿ ಅಯೋಡಿನ್ ಕೂಡ ಒಂದು. ಇದು ಥೈರಾಯಿಡ್ ಗ್ರಂಥಿಯಲ್ಲಿ ಸಂಗ್ರಹವಾಗುತ್ತದೆ., ಥೈರಾಯಿಡ್ ಹಾಮೋನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದ ಎಲ್ಲ್ಲ ಜೀವಕೋಶಗಳ, ನರಗಳ ಮತ್ತು ಬೌದ್ಧಿಕ ಬೆಳವಣಿಗೆಗೆ ಇದು ಅತ್ಯಗತ್ಯ. ಇದರ ಕೊರತೆಯಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಖಚಿತ.
ಲಕ್ಷಣಗಳೇನು?: ಅಯೋಡಿನ್ ಕೊರತೆಯಿಂದಾಗುವ ಪರಿಣಾಮಗಳು ಎಲ್ಲಾ ಸಮಯದಲ್ಲಿ ಕಣ್ಣಿಗೆ ಕಾಣುವಂತಿರುವುದಿಲ್ಲ. ಆ ತೊಂದರೆಗಳನ್ನು ಸರಿಪಡಿಸುವುದು ಸಹ ಕಷ್ಟ. ಮುಖ್ಯವಾಗಿ ಗರ್ಭಾವಸ್ಥೆಯಲ್ಲಿರುವ ಮತ್ತು ಬೆಳೆಯುವ ಮಕ್ಕಳಿಗೆ ಅಯೋಡಿನ್ ಕೊರತೆಯಿಂದ ಹೆಚ್ಚು ಹಾನಿ ಆಗುತ್ತದೆ. ತೀವ್ರವಾದ ಅಯೋಡಿನ್ ಕೊರತೆಯಿದ್ದರೆ ಗರ್ಭಪಾತವಾಗುವ ಅಥವಾ ಮಗು ಹೊಟ್ಟೆಯಲ್ಲೇ ಮರಣ ಹೊಂದುವ ಸಾಧ್ಯತೆ ಇರುತ್ತದೆ. ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ, ಐಕ್ಯೂ ಕಡಿಮೆಯಾಗುತ್ತದೆ. ದೃಷ್ಟಿ, ಶ್ರವಣ ಮತ್ತು ವಾಕ್ ದೋಷಗಳಾಗುವ ಸಾಧ್ಯತೆ ಇರುತ್ತದೆ. ಗಾಯಿಟರ್ ಅಂದರೆ ಥೈರಾಯಿಡ್ ಗ್ರಂಥಿಯ ಗಾತ್ರ ಹೆಚ್ಚಾಗುತ್ತದೆ. ಈ ತೊಂದರೆಗಳನ್ನು ಆಹಾರದಲ್ಲಿ ಸರಿ ಪ್ರಮಾಣದಲ್ಲಿ ಅಯೋಡಿನ್ ಸೇವಿಸುವುದರಿಂದ ತಡೆಗಟ್ಟಬಹುದು.
ಅಯೋಡಿನ್ ಮೂಲಗಳು: ಫೋರ್ಟಿಫೈಡ್ ಉಪ್ಪು, ಸೀಗಡಿ, ಕಡಲಮೀನು, ಕೆಲವು ಸಸ್ಯಗಳು, ಹಾಲಿನ ಉತ್ಪಾದನೆಗಳು, ಮೊಟ್ಟೆ, ಗೆಣಸು, ಬಾಳೆಹಣ್ಣು, ಈರುಳ್ಳಿ ಮುಂತಾದವು.
ಯಾವ ಆಹಾರವನ್ನು ಕಡಿಮೆ ಮಾಡಬೇಕು?: ಸೋಯ, ಎಲೆಕೋಸು, ಹೂಕೋಸು, ಬ್ರಕೋಲಿ, ನವಿಲುಕೋಸು. ಈ ತರಕಾರಿಗಳಲ್ಲಿ ತಯೋಸೈನೇಟ್ ಎಂಬ ಅಂಶ ಇರುತ್ತದೆ. ಅದು ಥೈರಾಯಿಡ್ ಗ್ರಂಥಿ ಅಯೋಡಿನನ್ನು ಗ್ರಹಿಸುವ ಶಕ್ತಿಯನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ಉಪ್ಪನ್ನು ಕಡಿಮೆ ಸೇವಿಸುವುದರಿಂದ ಅಯೋಡಿನ್ ಕೊರತೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಯೋಡಿನ್ ಸಮೃದ್ಧ ಆಹಾರ ಸೇವಿಸಬೇಕು. ಗರ್ಭಿಣಿಯರಿಗೆ ಅಯೋಡಿನ್ ಅವಶ್ಯಕತೆ ಹೆಚ್ಚಿರುತ್ತದೆ. ಅದಕ್ಕೆ 3 ಕಾರಣಗಳಿವೆ. 1. ಥೈರಾಯಿಡ್ ಹಾಮೋನ್ ಉತ್ಪಾದನೆ ಹೆಚ್ಚಳ; 2. ಮೂತ್ರದ ಮುಖಾಂತರ ಅಯೋಡಿನ್ ಹೊರಗೆ ಹೋಗುವ ಸಾಧ್ಯತೆ; 3. ಗರ್ಭಿಣಿಯರಲ್ಲಿ ಕಬ್ಬಿಣಾಂಶ ಕೊರತೆ. ಗರ್ಭ ಧರಿಸಲು ಇಚ್ಚೆಪಡುವವರಲ್ಲಿ ಮತ್ತು ಗರ್ಭಿಣಿಯರಲ್ಲಿ ಅಯೋಡಿನ್ ಕೊರತೆ ನೀಗಿಸುವುದರಿಂದ ಆರೋಗ್ಯವಂತ ಮಗುವನ್ನು ಪಡೆಯಲು ಯಶಸ್ವಿಯಾಗಬಹುದು. ಅಯೋಡಿನ್ ಉಪ್ಪನ್ನು ಭಾರತದಲ್ಲಿ ಶೇಕಡ 82.1 ಜನರು ಮಾತ್ರ ಉಪಯೋಗಿಸುತ್ತಿದ್ದಾರೆ. ಇದರ ಅರಿವು ಗ್ರಾಮೀಣ ಪ್ರದೇಶದಲ್ಲಿ ಕಡಿಮೆಯಿದೆ.
ಹೆಚ್ಚು ಸೇವನೆಯೂ ಅಪಾಯಕಾರಿ!: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಹಾಗೆಯೇ ಅತಿಯಾದ ಅಯೋಡಿನ್ ಸೇವನೆ ಸಹ ದೇಹದ ಮೇಲೆ ಹಲವು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಆದ್ದರಿಂದ ವಯಸ್ಕರು 600 ರಿಂದ 1100 ಎಂಸಿಜಿ ಮೇಲೆ ಮತ್ತು ಮಕ್ಕಳು 200 ರಿಂದ 450 ಎಂಸಿಜಿ ಮೇಲೆ ಅಯೋಡಿನ್ ಸೇವಿಸುವುದು ಉತ್ತಮವಲ್ಲ.