ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿ ಮೆರವಣಿಗೆ ಕ್ಷಣಗಣನೆ ಆರಂಭ | Mysore Dasara

Untitled design - 2025-10-02T132442.011
Published on

Mysore Dasara: ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು ಸಾಂಸ್ಕೃತಿಕ ನಗರಿ ಸಜ್ಜಾಗಿದೆ.

ಜಂಬೂಸವಾರಿ ಕಣ್ತುಂಬಿಕೊಳ್ಳಲು ಮುಂಜಾನೆಯಿಂದಲೇ ಮೈಸೂರಿನತ್ತ ಜನಸ್ತೋಮ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.

ಕುಂಭ ಲಗ್ನದಲ್ಲಿ ಸಂಜೆ 4.42ರಿಂದ 5.06 ವರೆಗಿನ ಶುಭ ಮುಹೂರ್ತದಲ್ಲಿ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡೇಶ್ವರಿ ತಾಯಿಗೆ ಸಿಎಂ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿ ಆರಂಭಗೊಳ್ಳಲಿದೆ. 6ನೇ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿಯನ್ನು ಹೊರಲಿದೆ. ಅಭಿಮನ್ಯುಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪಾ ಸಾಥ್ ನೀಡಲಿವೆ. ಜಂಬೂ ಸವಾರಿ ನೋಡಲು ಈಗಾಗಲೇ ತುದಿಗಾಲಿನಲ್ಲಿ ಜನರು ನಿಂತಿದ್ದಾರೆ.

ಸಿಎಂ ದಾಖಲೆ!

ಇನ್ನು ಸಿಎಂ ಸಿದ್ದರಾಮಯ್ಯ 8ನೇ ಬಾರಿಗೆ ಜಂಬೂ ಸವಾರಿಗೆ ಚಾಲನೆ ನೀಡುವ ಮೂಲಕ ಅತಿ ಹೆಚ್ಚು ಬಾರಿ ಜಂಬೂ ಸವಾರಿಗೆ ಚಾಲನೆ ನೀಡಿದ ಕೀರ್ತಿ ಪಡೆಯಲಿದ್ದಾರೆ. ಈ ಬಾರಿ ಜಂಬೂ ಸವಾರಿಯಲ್ಲಿ 58 ಸ್ತಬ್ದಚಿತ್ರಗಳು ಪ್ರದರ್ಶನಗೊಳ್ಳಲಿದೆ. 100ಕ್ಕೂ ಹೆಚ್ಚು ಕಲಾ ತಂಡಗಳು, 60ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು, ಅಶ್ವಾರೋಹಿ ದಳ, ಪೊಲೀಸ್ ಬ್ಯಾಂಡ್ ಹಾಗೂ ಪೊಲೀಸ್ ತುಕಡಿಗಳು ಸಾಗಲಿವೆ.

ಅಗ್ನಿ ಅನಾಹುತ ತಪ್ಪಿಸಲು 250 ಸಿಬ್ಬಂದಿ

ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಯಾವುದೇ ರೀತಿಯ ಅಗ್ನಿ ಅನಾಹುತ ಸಂಭವಿಸಿದರೆ ತುರ್ತಾಗಿ ಸ್ಪಂದಿಸಲು ಅಗ್ನಿಶಾಮಕ ದಳದ 250 ಸಿಬ್ಬಂದಿ  ನೇಮಕ ಮಾಡಲಾಗಿದೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ ಜಿಲ್ಲೆಯ ಒಟ್ಟು 20ಕ್ಕೂ ಹೆಚ್ಚು ಜಲವಾಹನ, 10 ಕ್ಷಿಪ್ರ ಸ್ಪಂದನ ವಾಹನ ಸೇರಿ ವಿವಿಧ ಸೇವೆಯ 30 ತುರ್ತು ಸೇವಾ ವಾಹನಗಳನ್ನು ಬಳಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net