ಸ್ವಾತಂತ್ರ್ಯ ದಿನಾಚರಣೆ ದಿನದಂದು ಮುದ್ದೇನಹಳ್ಳಿಯಲ್ಲಿ ವಿಶ್ವ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ

IMG_20250815_214715.jpg
Published on

ಚಿಕ್ಕಬಳ್ಳಾಪುರ: ಬರೋಬ್ಬರಿ ನೂರು ದಿನಗಳ ಕಾಲ ಆಧ್ಯಾತ್ಮಿಕ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿಂತನ ಮಂಥನ ಸೇರಿದಂತೆ ಪ್ರೇರಣಾದಾಯಕ ಚಟುವಟಿಕೆ ನಡೆಯಲಿರುವ ವಿಶ್ವ ಸಾಂಸ್ಕೃತಿಕ ಉತ್ಸವವು ಸ್ವಾತಂತ್ರ್ಯ ದಿನಾಚರಣೆಯಂದು ಚಾಲನೆ ಪಡೆದುಕೊಂಡಿತು.
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಪ್ರೇಮಾಮೃತಮ್‌ ಸಭಾಂಗಣದ ಆವರಣದಲ್ಲಿ ಸದ್ಗರು ಶ್ರೀ ಮಧುಸೂದನ ಸಾಯಿ ಶುಭ ಸಂದೇಶದೊಂದಿಗೆ ಕಲಾವಿದರು ಪ್ರಾರ್ಥನೆ, ಸಂಗೀತ ಕಾರ್ಯಕ್ರಮ, ವಾದ್ಯಗಳ ಕಲೆಗಳ ಪ್ರದರ್ಶನದ ಮೂಲಕ ಗಮನ ಸೆಳೆದರು.
ಸಾನಿಧ್ಯ ವಹಿಸಿ ಮಾತನಾಡಿದ ಸದ್ಗುರು, ಭಾರತವು ದಿವ್ಯಾತ್ಮರಿಂದ ದಿವ್ಯಾತ್ಮರಿಗಾಗಿ ರೂಪುಗೊಂಡ ಪವಿತ್ರ ನೆಲ. ಹಾಗೆಯೇ ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿ. ಪ್ರೇಮ ಮತ್ತು ಸೇವೆಯ ಪವಿತ್ರ ಪಾಠವನ್ನು ಬೋಧಿಸಿದ ಮಹಾತ್ಮರು ಎಂದರು.
ಸತ್ಯಸಾಯಿ ಲೋಕ ಸೇವಾ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಧಾನ ಮಾರ್ಗದರ್ಶಕ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸಮಸ್ತ ಮನುಕುಲವನ್ನು ಒಂದೇ ಛತ್ರದ ಅಡಿಯಲ್ಲಿ ತಂದು ಜಾಗತಿಕ ಸಹಬಾಳ್ವೆಯನ್ನು ಪ್ರಪಂಚಕ್ಕೆ ಸಾಬೀತುಪಡಿಸುವುದೇ ಭಗವಾನ್ ಬಾಬಾ ರವರ ಶತಮಾನೋತ್ಸವದ ಉದ್ದೇಶವಾಗಿದೆ. ಹಾಗೆಯೇ ಸತ್ಸಂಕಲ್ಪದ ಸಹಕಾರವೇ ಸದ್ಗುರುಗಳ ಶ್ರೀ ಮಧುಸೂದನ ಸಾಯಿ ಗುರಿಯಾಗಿದ್ದು ಮನುಕುಲದ ಸರ್ವತ್ರ ಸ್ವಾವಲಂಬನೆಯೇ ಕಾರ್ಯಕ್ರಮದ ಆಶಯ ಎಂದು ತಿಳಿಸಿದರು.

*ಸತ್ಯಸಾಯಿ ದಿವ್ಯಕಥಾ*
ಭಗವಾನ್ ಸತ್ಯಸಾಯಿ ಬಾಬಾ ಮಾರ್ಗದರ್ಶನದಲ್ಲಿ ಜಾಗತಿಕವಾಗಿ ಪ್ರೇಮ, ಸೇವೆಯ ಸಂದೇಶವನ್ನು ಸಾರುತ್ತಿರುವ ಸದ್ಗುರು ಶ್ರೀ ಮಧುಸೂದನ್ ಸಾಯಿ ವಿಚಾರದ ಸತ್ಯಸಾಯಿ ದಿವ್ಯಕಥಾ ಕಿರುಚಿತ್ರವನ್ನು ಬಿಡುಗಡೆಗೊಳಿಸಲಾಯಿತು. ಒಂದು ಜಗತ್ತು, ಒಂದು ಕುಟುಂಬ ಸಂದೇಶದ ಮಹತ್ವ, ಜಾಗತಿಕ ಸಾಧನೆಗಳು, ಮಹತ್ತರವಾದ ಕೊಡುಗೆಗಳು ಸೇರಿದಂತೆ ಹಲವು ಮಾಹಿತಿಯನ್ನು ವಿವರಿಸುವ ಈ ಕಿರುಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಇದೇ ವೇಳೆ ಭಾರತದ ಸ್ವಾತಂತ್ರ್ಯೋತ್ಸವದ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಅಭಿಪ್ರಾಯಗಳನ್ನು ಹಂಚಿಕೊಂಡರು.

*ನೂರು ದಿನಗಳ ಕಾರ್ಯಕ್ರಮ*
ಮುದ್ದೇನಹಳ್ಳಿಯ ಸತ್ಯಸಾಯಿ ಲೋಕಸೇವಾ ಸಂಸ್ಥೆಯಲ್ಲಿ ಒಂದು ವಿಶ್ವ ಒಂದು ಕುಟುಂಬ ಮಿಷನ್ ನಡಿ 100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವವು ನ.23 ರವರೆಗೆ ನಡೆಯಲಿದೆ. ಇದರಲ್ಲಿ ಕಲೆ, ಸಂಗೀತ, ಅಧ್ಯಾತ್ಮ ಮತ್ತು ಸೇವೆಯ ಮೂಲಕ ವಿಶ್ವಮಾನವ ಸಂದೇಶವನ್ನು ಸಾರಲಾಗುತ್ತದೆ.   ಈ ನೂರು ದಿನಗಳಲ್ಲಿ ನೂರು ದೇಶಗಳನ್ನು ಒಗ್ಗೂಡಿಸುವ ಉದ್ದೇಶವನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆ ಮತ್ತು ಗಡಿಗಳನ್ನು ಮೀರಿ ಜರನ್ನು ಬೆಸೆಯುವ ಮೌಲ್ಯಗಳನ್ನು ಸಾರಲಿದೆ.
ಪ್ರತಿದಿನವೂ ಒಂದೊಂದು ದೇಶಗಳನ್ನು ಒಳಗೊಳ್ಳುವ ರೀತಿಯಲ್ಲಿ ಆರ್ಕಷಕ ಚಟುವಟಿಕೆ ನಡೆಯಲಿದ್ದು ಖ್ಯಾತ ವಾಗ್ಮಿಗಳು, ಚಿಂತಕರು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೇರುಗಳ ಒಳನೋಟಗಳ ಬಗ್ಗೆ ಮಹತ್ವದ ವಿಚಾರಗಳನ್ನು ಮಂಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net