ಬ್ರೇನ್ ಟ್ಯೂಮರ್; ತಪ್ಪು ಕಲ್ಪನೆ ಬೇಡ

Brain Tumor
Published on

ಪಂಕಜ ಕೆ.ಎಂ.
ಬೆಂಗಳೂರು: ತಲೆನೋವು ಸಾಮಾನ್ಯವಾಗಿ ಎಲ್ಲರಿಗೂ ಒಂದಿಲ್ಲೊಂದು ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಂದು ಹೆದರುವ ಅಗತ್ಯವಿಲ್ಲ. ಆದರೆ ಅದು ದೀರ್ಘ ಸಮಯ ಕಾಡುತ್ತಿದ್ದರೆ ನಿರ್ಲಕ್ಷ್ಯ ಮಾಡುವುದೂ ಸರಿಯಲ್ಲ. ಏಕೆಂದರೆ ಕೆಲವೊಮ್ಮೆ ಅದು ಮಿದುಳು ಗಡ್ಡೆ (ಬ್ರೇನ್ ಟ್ಯೂಮರ್)ಗೆ ಕಾರಣ ಆಗುವ ಸಾಧ್ಯತೆಗಳಿವೆ.

ಬ್ರೇನ್ ಟ್ಯೂಮರ್ ಹೊಂದಿರುವ ವ್ಯಕ್ತಿಗಳಿಗೆ ನಿತ್ಯವೂ ತಲೆನೋವು ಬಾಧಿಸುತ್ತದೆ, ಮೈಗ್ರೇನ್​ಗಿಂತಲೂ ಅತಿಯಾದ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಬಹಳಷ್ಟು ಮಂದಿ ಇದನ್ನು ಸಾಮಾನ್ಯ ಎಂದು ಭಾವಿಸಿ ನೋವು ಕಾಣಿಸಿಕೊಂಡಾಗಲೆಲ್ಲ ಮಾತ್ರೆ ಸೇವಿಸಿ ಸುಮ್ಮನಾಗುತ್ತಾರೆ. ಕೆಲವೊಮ್ಮೆ ಅದು ಬ್ರೇನ್ ಟ್ಯೂಮರ್​ಗೂ ಕಾರಣವಾಗಬಹುದು. ಆದರೆ ಜನರಲ್ಲಿ ಈ ಬಗ್ಗೆ ಜಾಗೃತಿ ಇಲ್ಲದ ಕಾರಣ ಇದರ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ಅರಿವಿನ ಕೊರತೆಯಿಂದಾಗಿ ಜನರು ಗಂಭೀರ ಹಂತದಲ್ಲಿ ಚಿಕಿತ್ಸೆಗೆ ವೈದ್ಯರ ಬಳಿ ಹೋಗುತ್ತಾರೆ.

ವಿಶ್ವ ಬ್ರೇನ್ ಟ್ಯೂಮರ್ ದಿನ

ಪ್ರತಿ ವರ್ಷ ಜೂ. 8ರಂದು ವಿಶ್ವ ಬ್ರೇನ್ ಟ್ಯೂಮರ್ ದಿನ ಅಥವಾ ವಿಶ್ವ ಮಿದುಳು ಕ್ಯಾನ್ಸರ್ ದಿನ ಎಂದು ಆಚರಿಸಲಾಗುತ್ತದೆ. ಮಿದುಳಿನ ಗಡ್ಡೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನ ಆಚರಿಸಲಾಗುತ್ತದೆ. ಬ್ರೇನ್ ಟ್ಯೂಮರ್ ಕುರಿತು ಹಲವು ತಪ್ಪು ಕಲ್ಪನೆಗಳು ಇರುವುದರಿಂದ ಅದನ್ನು ಹೋಗ ಲಾಡಿಸಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯಲು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮೊದಲಿಗೆ ಜರ್ಮನ್ ಬ್ರೇನ್ ಟ್ಯೂಮರ್ ಅಸೋಸಿಯೇಷನ್ ಇದನ್ನು ಆರಂಭಿಸಿತು. ಈಗ ಜಗತ್ತಿನಾದ್ಯಂತ ಆಚರಿಸಲಾ ಗುತ್ತದೆ. ಈ ವರ್ಷ ‘ಬ್ರೇನ್ ಟ್ಯೂಮರ್ ರೋಗಿಗಳ ಸಬಲೀ ಕರಣದ ಭರವಸೆಗಾಗಿ ಒಂದಾಗೋಣ’ ಘೋಷವಾಕ್ಯವಿದೆ.

ರೋಗ ಲಕ್ಷಣಗಳು

  • ನಿಧಾನವಾಗಿ ಆರಂಭಗೊಂಡ ತಲೆನೋವು ಇದ್ದಕ್ಕಿದ್ದಂತೆ ಹೆಚ್ಚಾಗುವುದು
  • ಕಣ್ಣು ಮಂಜಾಗಿ ಕೆಲವೊಮ್ಮೆ ಏನೂ ಕಾಣಿಸದಂತೆ ಆಗುವುದು
  • ಪದೇಪದೆ ವಾಕರಿಕೆ ಮತ್ತು ವಾಂತಿ ಆಗುವುದು
  • ಮೂರ್ಛೆ ಹೋಗುವುದು
  • ನಡೆದಾಡುವಾಗ ದೇಹದ ಸಮತೋಲನ ತಪು್ಪವುದು
  • ಮಾನಸಿಕ ಒತ್ತಡ ಹೆಚ್ಚಾಗುವುದ
  • ಕೈ ಅಥವಾ ಕಾಲಿನ ಭಾಗದಲ್ಲಿಸಂವೇದನೆ ಕಳೆದುಕೊಂಡು ಚಲನೆ ಇಲ್ಲದಂತಾಗುವುದು
  • ಮಾತನಾಡಲು ಕಷ್ಟವಾಗುವುದು ಅಥವಾ ತೊದಲುವಿಕೆ
  • ನಿತ್ಯದ ಕೆಲಸ ಕಾರ್ಯಗಳಲ್ಲಿ ವಿಪರೀತ ಗೊಂದಲ ಉಂಟಾಗುವುದು
  • ಕಿವಿ ಕೇಳಿಸದಂತಾಗುವುದು, ದೃಷ್ಟಿ ಸಮಸ್ಯೆ

ಆತಂಕ ಬೇಡ

ಬ್ರೇನ್ ಟ್ಯೂಮರ್ ಪದ ಕೇಳಿದಾಕ್ಷಣ ಒಂದು ರೀತಿಯ ಭಯ ಆವರಿಸಿಕೊಳ್ಳುತ್ತದೆ. ಅದು ಬಂದರೆ ಜೀವನವೇ ಮುಗಿದು ಹೋಯಿತು ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ. ಇದರಿಂದ ರೋಗಿಗಳು ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಆದರೆ ಆತ್ಮವಿಶ್ವಾಸದಿಂದ ಬ್ರೇನ್ ಟ್ಯೂಮರ್ ಗೆಲ್ಲಬಹುದಾಗಿದೆ. ಮಾತ್ರವಲ್ಲ ಇಂದು ವೈದ್ಯಕೀಯ ವಿಜ್ಞಾನ ನರಶಸ್ತ್ರ ಚಿಕಿತ್ಸೆ ಹಾಗೂ ನ್ಯೂರೋ ಆಂಕಾಲಜಿ ಕ್ಷೇತ್ರದಲ್ಲಿ ಬೆಳವಣಿಗೆ ಹೊಂದಿದ್ದು ಗುಣಮಟ್ಟದ ಚಿಕಿತ್ಸೆ ಲಭ್ಯವಿದೆ. ಹಾಗಾಗಿ ಆತಂಕ ಪಡುವ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು.

ಕಾರಣಗಳು

ಕೌಟುಂಬಿಕ ಇತಿಹಾಸದಲ್ಲಿ ಮಿದುಳು ಕ್ಯಾನ್ಸರ್ ಇದ್ದರೆ
ದೀರ್ಘಕಾಲದಿಂದ ಧೂಮಪಾನ ಮಾಡುತ್ತಿರುವವರಲ್ಲಿ
ಸಸ್ಯನಾಶಕಗಳು, ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುವಾಗ ಎಚ್ಚರಿಕೆ ವಹಿಸದಿರುವುದು
ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್ ಉಂಟುಮಾಡುವ ಪದಾರ್ಥಗಳೊಂದಿಗೆ ಕೆಲಸ ಮಾಡುವುದು. ಮಾನೋನ್ಯೂಕ್ಲಿಯೊಸಿಸ್ ಅಥವಾ ಎಪ್ಸಿ್ಟೕನ್ ಬಾರ್ ವೈರಸ್ ಸೋಂಕು ಹೊಂದಿರುವುದು.

ಹೇಗೆ ಬರುತ್ತದೆ?

ಮಿದುಳಿನ ಕೋಶಗಳು ಇದ್ದಕ್ಕಿದ್ದಂತೆ ಅಸಹಜ ಬೆಳವಣಿಗೆ ಹೊಂದಿ, ಒಂದೇ ಕಡೆ ಶೇಖರಣೆಯಾಗಿ ಮಿದುಳಿನ ಕಾರ್ಯಕ್ಷಮತೆಯನ್ನು ಮತ್ತು ನರಮಂಡಲ ವ್ಯವಸ್ಥೆಯ ನಿತ್ಯದ ಕಾರ್ಯಾಚರಣೆಯನ್ನು ಕುಂಠಿತಗೊಳಿಸುತ್ತದೆ. ಇದೊಂದು ಗಡ್ಡೆಯ ರೂಪದಲ್ಲಿ ಉಂಟಾಗಿ ಮೆನಿಂಗ್ಸ್, ಕ್ರೇನಿಯಲ್ ನರ ಮಂಡಲ, ಪಿಟ್ಯುಟರಿ ಗ್ರಂಥಿ ಅಥವಾ ಪೀನಿಯಲ್ ಗ್ರಂಥಿಗಳನ್ನು ಒಳಗೊಂಡು ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಿದುಳಿನ ಸಾಮಾನ್ಯ ಕೋಶಗಳಲ್ಲಿ ಡಿಎನ್​ಎ ರೂಪಾಂತರವಾಗಿ ಈ ಪ್ರಕ್ರಿಯೆ ಉಂಟಾಗುತ್ತದೆ ಎಂದು ಅಧ್ಯಯನ ವರದಿ ಹೇಳುತ್ತದೆ.

ಟ್ಯೂಮರ್​ನ ವಿಧಗಳು

ಮ್ಯಾಲಿಗ್ನನ್ಟ ಟ್ಯೂಮರ್ (ಇದು ಕ್ಯಾನ್ಸರ್​ಕಾರಕ ಗಡ್ಡೆ), ಬಿನೈನ್ ಟ್ಯೂಮರ್ (ಇದು ಕ್ಯಾನ್ಸರ್​ರಹಿತ ಗಡ್ಡೆ), ಪ್ರೖೆಮರಿ ಬ್ರೇನ್ ಟ್ಯೂಮರ್ (ಇದು ಮೊದಲು ನಿುದುಳಿನಲ್ಲಿ ಆರಂಭವಾಗುವ ಗಡ್ಡೆ) ಹಾಗೂ ಮೆಟಾಸ್ಟಾಟಿಕ್ ಟ್ಯೂಮರ್ (ಇದು ದೇಹದ ಇತರೆ ಭಾಗಗಳಲ್ಲಿ ಕ್ಯಾನ್ಸರ್ ಕಾಣಿಸಿಕೊಂಡು ನಂತರ ಮಿದುಳಿಗೆ ಹರಡುವ ಗಡ್ಡೆ) ಇತ್ಯಾದಿ ವಿಧಗಳಿವೆ. ಸಮಯಕ್ಕೆ ಸರಿಯಾಗಿ ತಪಾಸಣೆ ಹಾಗೂ ಚಿಕಿತ್ಸೆ ಪಡೆದರೆ ಗುಣ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತದೆ ಎನ್ನುತ್ತಾರೆ ನರರೋಗ ತಜ್ಞರು.

ಕಾರಣಗಳು

  • ಕೌಟುಂಬಿಕ ಇತಿಹಾಸದಲ್ಲಿ ಮಿದುಳು ಕ್ಯಾನ್ಸರ್ ಇದ್ದರೆ
  • ದೀರ್ಘಕಾಲದಿಂದ ಧೂಮಪಾನ ಮಾಡುತ್ತಿರುವವರಲ್ಲಿ
  • ಸಸ್ಯನಾಶಕಗಳು, ರಸಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುವಾಗ ಎಚ್ಚರಿಕೆ ವಹಿಸದಿರುವುದು
  • ಸೀಸ, ಪ್ಲಾಸ್ಟಿಕ್, ರಬ್ಬರ್, ಪೆಟ್ರೋಲಿಯಂ ಮತ್ತು ಕೆಲವು ಬಟ್ಟೆಗಳಂತಹ ಕ್ಯಾನ್ಸರ್ ಉಂಟುಮಾಡುವ
  • ಪದಾರ್ಥಗಳೊಂದಿಗೆ ಕೆಲಸ ಮಾಡುವುದು. ಮಾನೋನ್ಯೂಕ್ಲಿಯೊಸಿಸ್ ಅಥವಾ ಎಪ್ಸೀನ್ ಬಾರ್ ವೈರಸ್ ಸೋಂಕು ಹೊಂದಿರುವುದು.

ಚಿಕಿತ್ಸಾ ವಿಧಾನಗಳು

ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆಯಾಗಿದ್ದು, ಬ್ರೇನ್ ಟ್ಯೂಮರ್ ಗುಣಪಡಿಸಲು ಸಾಕಷ್ಟು ಚಿಕಿತ್ಸಾ ವಿಧಾನಗಳು ಲಭ್ಯವಿದೆ. ಮೊದಲಿಗೆ ವೈದ್ಯರು ಅಗತ್ಯ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಿ ಗಡ್ಡೆ ಇರುವುದನ್ನು ಖಾತ್ರಿಪಡಿಸಿಕೊಂಡು ನಂತರ ಶಸ್ತ್ರಚಿಕಿತ್ಸೆ ನಡೆಸುತ್ತಾರೆ. ಗಡ್ಡೆಯನ್ನು ದೊಡ್ಡದಾಗಿ ತೆರೆಯುವ ಬದಲು ಚಿಕ್ಕ ಛೇದದ ಮೂಲಕ ಚಿಕಿತ್ಸೆ ನೀಡಬಹುದಾಗಿದೆ. ಈ ಶಸ್ತ್ರಚಿಕಿತ್ಸೆಯ ಅನುಕೂಲಗಳೆಂದರೆ ಚಿಕ್ಕ ಛೇಧನ, ನೋವು ಹಾಗೂ ಕಲೆರಹಿತವಾಗಿದ್ದು, ಕಡಿಮೆ ಪ್ರಮಾಣದಲ್ಲಿ ರಕ್ತ ಸ್ರವಿಸುವಿಕೆಯಾಗುತ್ತದೆ. ಕಡಿಮೆ ದಿನ ಆಸ್ಪತ್ರೆ ವಾಸ ಸಾಕು.

ನಮ್ಮ ದೇಹ ರೋಗದ ಮುನ್ಸೂಚನೆಗಳನ್ನು ನೀಡಿದಾಗ ಎಚ್ಚರಿಕೆಯಿಂದ ಗಮನಿಸಬೇಕು. ರೋಗದ ಯಾವುದೇ ಲಕ್ಷಣಗಳು ಗೋಚರಿಸಿದರೂ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಂಡು ಸಲಹೆ ಪಡೆಯಬೇಕು. ಆರಂಭಿಕ ಹಂತದಲ್ಲಿ ರೋಗ ಪತ್ತೆಯಿಂದ ಉತ್ತಮ ಫಲಿತಾಂಶ ಹೊಂದಲು ಸಾಧ್ಯ. | ಡಾ. ಕೋಮಲ್ ಪ್ರಸಾದ್ ನಾರಾಯಣ ಹೆಲ್ತ್ ಸಿಟಿಯ ಮಜುಂದಾರ್ ಷಾ ಮೆಡಿಕಲ್ ಸೆಂಟರ್​ನ ನ್ಯೂರೋಸರ್ಜರಿ ಸೀನಿಯರ್ ಕನ್ಸಲ್ಟೆಂಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net