

ನವದೆಹಲಿ: ಕರೊನಾ ಸೋಂಕು ತಡೆ ಹಾಗೂ ಸೋಂಕಿಗೆ ಒಳಗಾದವರನ್ನು ಪತ್ತೆ ಹಚ್ಚಲು ನೆರವಾಗುವ ಆರೋಗ್ಯ ಸೇತು ಆ್ಯಪ್ಗೆ ಜಾಗತಿಕವಾಗಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ತಾಂತ್ರಿಕವಾಗಿ ಮುಂದುವರಿದ ದೇಶಗಳಿಗೆ ಹೋಲಿಸಿದಲ್ಲಿ ಭಾರತ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿದೆ. ಜತೆಗೆ ಸೋಂಕು ಹಬ್ಬುವುದನ್ನು ನಿಯಂತ್ರಿಸುವಲ್ಲಿ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಪರಿಣತರು ಹಾಗೂ ವಿಶ್ವದ ಅನೇಕ ಸಂಸ್ಥೆಗಳು ಆರೋಗ್ಯ ಸೇತು ಆ್ಯಪ್ಅನ್ನು ಹೊಗಳಿವೆ.
ಈವರೆಗೆ ಆರೋಗ್ಯ ಸೇತು ಆ್ಯಪ್ಅನ್ನು ಒಂದು ಕೋಟಿಗೂ ಅಧಿಕ ಜನರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇಂಗ್ಲಿಷ್ ಹಾಗೂ ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿ ಪ್ರಮುಖ ಭಾರತೀಯ ಭಾಷೆಗಳಲ್ಲಿ ಆ್ಯಪ್ ಲಭ್ಯವಿದೆ.
ಈ ಆ್ಯಪ್ ಬಿಡುಗಡೆ ಬಳಿಕ, ಸ್ಮಾರ್ಟ್ಫೋನ್ಗಳಲ್ಲೂ ಕೋವಿಡ್-19 ಸೋಂಕಿತರ ಸಂಪರ್ಕಕ್ಕೆ ಒಳಗಾಗುವುದನ್ನು ತಡೆಯಲು ಮೊಬೈಲ್ ಬಳಕೆದಾರರನ್ನು ಎಚ್ಚರಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿರುವುದಾಗಿ ಆ್ಯಪಲ್ ಹಾಗೂ ಗೂಗಲ್ ಸಂಸ್ಥೆಗಳು ಘೋಷಿಸಿವೆ.
ಕರೊನಾ ಸೋಂಕಿತರ ಸಂಪರ್ಕಕ್ಕೆ ಒಳಗಾಗುವುದನ್ನು ತಡೆಯುವಲ್ಲಿ ಭಾರತವು ವಿಶ್ವಕ್ಕೆ ಮಾರ್ಗದರ್ಶಿ ಸ್ಥಾನದಲ್ಲಿದೆ. ಗ್ರಾಹಕರ ಖಾಸಗಿತನವನ್ನು ಕಾಯ್ದುಕೊಳ್ಳುವ ಮೂಲಕ ಈ ಆ್ಯಪ್ ಮಾದರಿಯಾಗಿದೆ. ಜತೆಗೆ ಕೋಟ್ಯಂತರ ಗ್ರಾಹಕರು ಈ ಆ್ಯಪ್ಅನ್ನು ಏಕಕಾಲದಲ್ಲಿ ಬಳಸುವಂತೆ ರೂಪಿಸಲಾಗಿದೆ. ಆರೋಗ್ಯ ಸೇತು ಮಾದರಿಯಲ್ಲಿಯೇ ಗೂಗಲ್ ಹಾಗೂ ಆ್ಯಪಲ್ ಕಂಪನಿಗಳು ತಂತ್ರಾಂಶ ರೂಪಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ನೀತಿ ಆಯೋಗದ ಅಧ್ಯಕ್ಷ ಅಮಿತಾಬ್ ಕಾಂತ್ ಹೇಳಿದ್ದಾರೆ.
ವಿನೂತನ ಆವಿಷ್ಕಾರಗಳು ಜನರಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಗುತ್ತವೆ ಎಂಬುದಕ್ಕೆ ಈ ಆ್ಯಪ್ ಉದಾಹರಣೆಯಾಗಿದೆ ಎಂದು ವಿಶ್ವಬ್ಯಾಂಕ್ ಕೂಡ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಸ್ಮಾರ್ಟ್ಫೋನ್ನಲ್ಲಿ ಆ್ಯಪ್ ಮಾಡಿಕೊಂಡು ಕೆಲ ವಿವರಗಳನ್ನು ದಾಖಲಿಸಿಬೇಕು. ಫೋನ್ನ ಬ್ಲ್ಯೂಟೂಥ್ ಹಾಗೂ ಲೋಕೇಷನ್ಸರ್ವೀಸ್ಗಳನ್ನು ಆನ್ ಮಾಡಿರಬೇಕು. ನೀವೇನಾದರೂ ಸೋಂಕಿತರ ಸಂಪರ್ಕಕ್ಕೆ ಬಂದರೆ, ಆ್ಯಪ್ ನಿಮ್ಮನ್ನು ಎಚ್ಚರಿಸುತ್ತದೆ. ಕೂಡಲೇ ಅವರಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕಿಗೆ ಒಳಗಾಗುವುದರಿಂದ ನಿಮ್ಮನ್ನು ನೀವು ಸೋಂಕಿಗೆ ಒಳಗಾಗುವುದರಿಂದ ಕಾಪಾಡಿಕೊಳ್ಳಬಹುದು.