ಜೀವವೈವಿಧ್ಯತೆ ರಕ್ಷಿಸಿಸದಿದ್ದರೆ ಅಪಾಯ; ಪ್ರೊ. ಎಂ.ವೆಂಕಟೇಶ್ವರಲು ಆತಂಕ

13 smg 2
Published on

ಶಿವಮೊಗ್ಗ: ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯಗಳಂತಹ ಮಾನವ ನಿರ್ಮಿತ ದುರಂತಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಆತಂಕ ವ್ಯಕ್ತಪಡಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದಲ್ಲಿ ಸೋಮವಾರ ವನ್ಯಜೀವಿ ಅಧ್ಯಯನದ ಪ್ರಾಯೋಗಿಕ ತಂತ್ರಗಳ ಕುರಿತು ಒಂದು ವಾರದ ಕಾರ್ಯಾಗಾರ ಅವರು ಉದ್ಘಾಟಿಸಿ ಮಾತನಾಡಿದರು.

2021ರ ಅಂತ್ಯದ ವೇಳೆಗೆ ಭಾರತದ ಅರಣ್ಯ ವ್ಯಾಪ್ತಿ 2,261 ಚದುರ ಕಿ.ಮೀ ಇದ್ದು, ಒಟ್ಟಾರೆ ಭೂಭಾಗದ ಶೇ. 24.62ರಷ್ಟಿದೆ ಎಂದು ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ಬಿಡುಗಡೆ ಮಾಡಿರುವ ಭಾರತೀಯ ಅರಣ್ಯ ಸಮೀಕ್ಷೆಯ ವರದಿ ತಿಳಿಸಿರುವುದು ಸಂತಸದ ವಿಷಯ. ಆದರೆ, ಸರ್ಕಾರಗಳು ನದಿ ಜೋಡಣೆ, ಬಹು ಉದ್ದೇಶಿತ ಬೃಹತ್ ಅಣೆಕಟ್ಟುಗಳ ನಿರ್ಮಾಣ, ಹೆದ್ದಾರಿಗಳು ಮತ್ತು ರೈಲ್ವೆ ಮಾರ್ಗಗಳ ನಿರ್ಮಾಣ, ಹೀಗೆ ಬೃಹತ್ ಯೋಜನೆಗಳ ಬಗೆಗೇ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಪರಿಸರ ಸಂರಕ್ಷಣೆಗೆ ವ್ಯತಿರಿಕ್ತವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದರು.

ಸ್ನಾತಕೋತ್ತರ ವನ್ಯಜೀವಿ ಮತ್ತು ನಿರ್ವಹಣಾ ವಿಭಾಗದ ಅಧ್ಯಕ್ಷ ಪ್ರೊ. ವಿಜಯಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಒಟ್ಟಾರೆ ಅರಣ್ಯ ಪ್ರದೇಶದ ಉಳಿವಿಗೆ ನೇರವಾಗಿ ಸಂಬಂಧಪಟ್ಟಿದೆ. ಪರಿಸರದ ಆಡಿಟಿಂಗ್, ಪರಿಣಾಮಗಳ ಅಧ್ಯಯನಗಳನ್ನು ಕೈಗೊಳ್ಳದೆ ಯಾವುದೇ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ರೀತಿಯ ವಿದ್ಯಮಾನಗಳ ಬಗ್ಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಪ್ರೊ. ಸಿ.ಗೀತಾ, ಪ್ರೊ. ನಾಗರಾಜ್, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಮಹದೇವನ್, ಪ್ರೊ. ಬಿ.ತಿಪ್ಪೇಸ್ವಾಮಿ, ಡಾ. ಪ್ರಮೋದ್, ಡಾ. ಹರೀಶ್, ಡಾ. ರಾಘವೇಂದ್ರ ಗೌಡ, ಡಾ. ಸೌಮ್ಯಾ, ಇತರೆ ವಿಭಾಗದ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net