ಜ್ಞಾನದೊಂದಿಗೆ ಕೌಶಲ ವೃದ್ಧಿಸಿಕೊಳ್ಳಿ

20BTP01
Published on

ಬೆಟ್ಟದಪುರ: ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಕೌಶಲ ಜ್ಞಾನವನ್ನೂ ವೃದ್ಧಿಸಿಕೊಳ್ಳಬೇಕು ಎಂದು ಪಿರಿಯಾಪಟ್ಟಣ ಸರ್ಕಾರಿ ಡಿ.ಪಿ.ಬಿ.ಎಸ್. ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬಸವರಾಜು ಸಲಹೆ ನೀಡಿದರು.
ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಔದ್ಯೋಗಿಕ ಕೌಶಲಗಳು’ ಎಂಬ ವಿಷಯದ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉದ್ಯೋಗಿಕ ಕೌಶಲಗಳ ಪ್ರಾಮುಖ್ಯತೆ ಅತಿ ಮುಖ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಾನಸಿಕ ಸಾಮರ್ಥ್ಯ, ಪ್ರಚಲಿತ ಘಟನೆಗಳ ಜ್ಞಾನ, ಮೂಲಭೂತ ಗಣಿತ, ಸಂಖ್ಯಾಶಾಸ್ತ್ರದ ಪರಿಕಲ್ಪನೆ, ಸಂವಹನ ಕೌಶಲ, ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಷಯಗಳು ಪ್ರಮುಖವಾಗಿ ಪಾತ್ರವಹಿಸುತ್ತವೆ. ಇಂತಹ ವಿಚಾರಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಶೈಕ್ಷಣಿಕ ವರ್ಷದಲ್ಲಿ ಸಿಗುವ ಅವಕಾಶಗಳನ್ನು ಸದ್ಬಳಿಕೆ ಮಾಡಿಕೊಂಡು ಅಧ್ಯಯನ ನಡೆಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ಜ್ಞಾನವಿದ್ದರೆ ಯಾವುದೇ ಕೇಂದ್ರ ಸರ್ಕಾರದ ಬ್ಯಾಂಕಿಂಗ್, ಅಂಚೆ ಕಚೇರಿ ರೈಲ್ವೆ ನೇಮಕ ಇನ್ನಿತರ ಪರೀಕ್ಷೆಗಳಲ್ಲಿ ಸುಲಭವಾಗಿ ಯಶಸ್ಸನ್ನು ಕಾಣಬಹುದು ಇದರಿಂದ ನೇಮಕಾತಿಯು ಕೂಡ ನಿಮಗೆ ದೊರಕುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಏಕಾಗ್ರತೆಯಿಂದ ಅಭ್ಯಾಸ ಮಾಡುವ ಮೂಲಕ ಎಲ್ಲಾ ವಿಚಾರದಲ್ಲಿ ವಿದ್ಯಾರ್ಥಿಗಳು ನಿಪುಣರಾಗಿರಬೇಕು ಎಂದರು.
ಪ್ರಾಂಶುಪಾಲ ಡಾ. ಡಿ.ಎಸ್ ಜಗದೀಶ, ಗ್ರಂಥಪಾಲಕ ಎಚ್.ಪ್ರಶಾಂತ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಭೈರಪ್ಪ, ಅಧಿಕ್ಷಕ ನಾಗರಾಜೇಗೌಡ, ಗುಮಾಸ್ತ ಕೆ.ಎಚ್ ಅವಿನಾಶ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net