

ಹುಣಸೂರು: ತಾಲೂಕಿನ ಸಮಸ್ಯೆಗಳ ಕುರಿತು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಗಮನಹರಿಸುತ್ತಿಲ್ಲವೆನ್ನುವ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಹೇಳಿಕೆ ಸರಿಯಲ್ಲ ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಸ್ಪಷ್ಟಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ನಾನು ಸೋತಿದ್ದರೂ ನನ್ನ ಕ್ಷೇತ್ರದ ಜನತೆಗಾಗಿ ಸರ್ಕಾರದ ಮಟ್ಟದಲ್ಲಿ ದುಡಿಯುತ್ತಲೇ ಇದ್ದೇನೆ. ವಾರದಲ್ಲಿ ಎರಡು ದಿನ ಹುಣಸೂರಿಗೆ ಭೇಟಿ ನೀಡಿ ಜನರೊಂದಿಗೆ ಬೆರೆತು ಕಷ್ಟಸುಖಗಳನ್ನು ಆಲಿಸುತ್ತಿದ್ದೇನೆ. ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಅರಸು ಭವನ, ಸಾರ್ವಜನಿಕ ಆಸ್ಪತ್ರೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರದ ಮಟ್ಟದಲ್ಲೇ ಶ್ರಮಿಸುತ್ತಲೇ ಇದ್ದೇನೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗ ನಾನೇನೂ ಸಂವಿಧಾನಾತ್ಮಕ ಹುದ್ದೆಯಲ್ಲಿ ಇಲ್ಲ. ಹಾಗಿದ್ದೂ ನನ್ನೂರಿನ ಜನರ ಬದುಕು ಬವಣೆ ಕುರಿತು ಸ್ಪಂದಿಸುವುದು ನನ್ನ ಕರ್ತವ್ಯ. ನನ್ನ ಬಳಿ ಬಂದವರಿಗೆ ನನ್ನ ಕೈಲಾದ ಸಹಕಾರವನ್ನು ನೀಡುತ್ತಲೂ ಇದ್ದೇನೆ. ಮಿಕ್ಕಂತೆ ತಾಲೂಕಿನ ಶಾಸಕರು, ವಿಧಾನಪರಿಷತ್ ಸದಸ್ಯರು ಇದ್ದು, ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬ ಅದ್ಭುತ ಆರ್ಥಿಕ ತಜ್ಞ ಎನ್ನುವುದನ್ನು ಮತ್ತೆ ನಿರೂಪಿಸಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜು, ಪುಟ್ಟರಾಜು, ರಮೇಶ್, ಚಿಕ್ಕಸ್ವಾಮಿ ಹಾಜರಿದ್ದರು.