

ನಂಜನಗೂಡು: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜೆನಿತ್ ಟೆಕ್ಸ್‌ಟೈಲ್ಸ್ ಕಾರ್ಖಾನೆಯಲ್ಲಿ ಕರೊನಾ ಸೋಂಕು ಹರಡದಂತೆ ಸುರಕ್ಷಿತ ಕ್ರಮಗಳನ್ನು ಅನುಸರಿಸುತ್ತಿಲ್ಲ ಹಾಗೂ ಕಾರ್ಮಿಕರ ವೇತನವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಆರೋಪಿಸಿ ಕಾರ್ಮಿಕರು ಕಾರ್ಖಾನೆ ಮುಂಭಾಗ ಸೋಮಮವಾರ ಪ್ರತಿಭಟನೆ ನಡೆಸಿದರು.
ನಗರದ 5ನೇ ಕ್ರಾಸ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದರಿಂದ ಆ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಆದರೂ ಆ ಪ್ರದೇಶದ ನಿವಾಸಿಯೊಬ್ಬರು ಕೆಲಸಕ್ಕೆ ಹಾಜರಾಗಿದ್ದು, ಕಾರ್ಮಿಕನಿಗೆ ವೇತನ ಸಹಿತ ರಜೆ ನೀಡುವಂತೆ ಮನವಿ ಮಾಡಿದ್ದರೂ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿಲ್ಲ ಎಂದು ಆರೋಪಿಸಿದರು.
ಸೀಲ್‌ಡೌನ್ ಪ್ರದೇಶದ ಕಾರ್ಮಿಕರು ಅವಶ್ಯಕತೆ ಇದ್ದಲ್ಲಿ ಕೆಲಸಕ್ಕೆ ಹಾಜರಾಗಲಿ. ಇಲ್ಲವಾದಲ್ಲಿ ಇಎಸ್‌ಐ ರಜೆ ತೆಗೆದುಕೊಳ್ಳಲಿ ಎಂದು ನಿರ್ಲಕ್ಷೃದ ಉತ್ತರವನ್ನು ಕಾರ್ಖಾನೆಯವರು ನೀಡುತ್ತಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆ ಅದ್ಯಕ್ಷ ಮಹದೇವಪ್ಪ, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಮುರುಳಿಧರ್ ಪೇಶ್ವೆ, ಸಂಜಯ್ ಅರಸ್, ಕೃಷ್ಣಶೆಟ್ಟಿ, ರಾಜು, ರಾಮು, ಮತ್ತಿತರರು ಭಾಗವಹಿಸಿದ್ದರು.