ಆಗ ಕಾರ್ವಿುಕ ಮುಖಂಡ, ಈಗ ಎಐಸಿಸಿ ಅಧ್ಯಕ್ಷ!

Kharge 2
Published on

| ಸ.ದಾ.ಜೋಶಿ ಕಲಬುರಗಿ

ಅದು ಎಪ್ಪತ್ತರ ದಶಕದ ಆರಂಭ. ಕಲಬುರಗಿಯಲ್ಲಿ ಆಗಿನ್ನೂ ಎಂಎಸ್​ಕೆ ಮಿಲ್ ಸದ್ದು ಮಾಡುತ್ತಿತ್ತು. ಕಾರ್ವಿುಕ ಚಳವಳಿ ಜೋರಾಗಿತ್ತು. ನಿರಂತರ ಪ್ರತಿಭಟನೆ ನಡೆಯುತ್ತಿದ್ದವು. ಆ ಹೋರಾಟಕ್ಕೆ ಶಕ್ತಿ ತುಂಬಲು ಚಿಗುರು ಮೀಸೆಯ ಯುವಕನೊಬ್ಬ ಅಖಾಡಕ್ಕೆ ಧುಮುಕುತ್ತಾನೆ. ಮುಂದಿನ ಹಾದಿ ಏನೆಂಬುದು ತಿಳಿದಿರಲಿಲ್ಲ. ರಾಜಕೀಯದ ಗಂಧ, ಗಾಳಿಯೇ ಗೊತ್ತಿರಲಿಲ್ಲ. ಯಾವುದೇ ಫಲಾಪೇಕ್ಷೆ ಇಲ್ಲದೆ ಆರಂಭಿಸಿದ ಸಾಮಾಜಿಕ ಹೋರಾಟ ಅಲ್ಪ ಅವಧಿಯಲ್ಲೇ ಕಾರ್ವಿುಕ ಮುಖಂಡನ ಪಟ್ಟ ಕೊಟ್ಟಿತು. ಬಳಿಕ ಆಗಿನ ಪವರ್​ಫುಲ್ ಪಾರ್ಟಿ ಕಾಂಗ್ರೆಸ್ ಸೆಳೆಯಿತು. ಸಾಮಾನ್ಯ ಕಾರ್ಯಕರ್ತನಾಗಿ ಸೇರಿದ ಪಕ್ಷಕ್ಕೆ ಆರು ದಶಕಗಳ ನಂತರ ತಾನೇ ಸುಪ್ರೀಮೊ!

ಹೌದು, ನೀವು ಊಹಿಸಿದಂತೆ ಆಗಿನ ಚಿಗುರು ಮೀಸೆಯ ಆ ಕಾರ್ವಿುಕ ಮುಖಂಡ ಬೇರ್ಯಾರೂ ಅಲ್ಲ, ಎಐಸಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಹಿರಿಯ ನೇತಾರ ಡಾ.ಮಲ್ಲಿಕಾರ್ಜುನ ಖರ್ಗೆ.

80ರ ಹರೆಯದ ಖರ್ಗೆ ಅವರ ಸಾಮಾಜಿಕ, ರಾಜಕೀಯ ಹಾದಿ ಬಲು ವೈಶಿಷ್ಟ್ಯ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಎಂಬ ಪುಟ್ಟ ಗ್ರಾಮ ಜನ್ಮಭೂಮಿಯಾದರೆ, ಕಲಬುರಗಿ ಕರ್ಮಭೂಮಿ. ಹೊಟ್ಟೆಪಾಡಿಗಾಗಿ ಕೆಲಸ ಅರಸಿ ತಂದೆ ಮಾಪಣ್ಣ ಕಲಬುರಗಿಗೆ ಗುಳೆ ಬಂದರು. ಎಂಎಸ್​ಕೆ ಮಿಲ್​ನಲ್ಲಿ ಕಾರ್ವಿುಕರಾಗಿ ಸೇರಿದರು. ತಂದೆ ಕೆಲಸ ಮಾಡುತ್ತಿದ್ದ ಕಾರ್ಖಾನೆ ಖರ್ಗೆ ಅವರನ್ನು ಕಾರ್ವಿುಕ ಚಳವಳಿಗೆ ಧುಮುಕಿಸಿತು. 70ರ ದಶಕದಲ್ಲಿ ಮಜದೂರ್ ಸಂಘದ ಮುಖಂಡರಾಗಿ ಆರಂಭಿಸಿದ ಇವರ ಕಾರ್ವಿುಕ ಹೋರಾಟ ಮುಂದೆ ರಾಜಕೀಯಕ್ಕೆ ಗಟ್ಟಿ ನೆಲೆ ಒದಗಿಸಿತು. ಆರು ದಶಕದ ರಾಜಕೀಯ ಜೀವನದಲ್ಲಿ ಖರ್ಗೆ ಸಾಕಷ್ಟು ಏಳು-ಬೀಳು ಕಂಡವರು. ಆದರೆ ಎಂಥದ್ದೇ ಪರಿಸ್ಥಿತಿ ಬಂದರೂ, ಏನೇ ಸವಾಲು ಎದುರಾದರೂ ಯಾವತ್ತೂ ಪಕ್ಷನಿಷ್ಠೆ ಬಿಟ್ಟಿಲ್ಲ. ತತ್ವ, ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ. ಏಕಪಕ್ಷ ನಿಷ್ಠೆಯು ಒಲ್ಲೆ ಎಂದರೂ ಇಂದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿದೆ.

ಕೊಟ್ಟ ಕೆಲಸಕ್ಕೆ ನ್ಯಾಯ: ಸರ್ಕಾರ ಅಥವಾ ಪಕ್ಷದಲ್ಲಿ ತಮಗೆ ವಹಿಸಿದ ಕೆಲಸಕ್ಕೆ ನ್ಯಾಯ ಒದಗಿಸಿರುವುದು ಖರ್ಗೆ ಹೆಗ್ಗಳಿಕೆ. ಶಿಕ್ಷಣ ಸಚಿವರಾಗಿ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ತರುವಲ್ಲಿ ಶ್ರಮಿಸಿದರು. ಎಸ್​ಸಿ-ಎಸ್​ಟಿ ಆಡಳಿತ ಮಂಡಳಿಗಳ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಬ್ಯಾಕ್​ಲಾಗ್ ಹುದ್ದೆಗಳನ್ನು ತುಂಬುವಲ್ಲಿ ಖರ್ಗೆ ಪಾತ್ರ ಗಣನೀಯ. ಕಂದಾಯ ಸಚಿವರಾಗಿ ಭೂ ಸುಧಾರಣಾ ಕಾಯ್ದೆ ಪರಿಣಾಮಕಾರಿ ಜಾರಿಯಾಗುವಂತೆ ನೋಡಿಕೊಂಡರು. ಭೂ ನ್ಯಾಯಮಂಡಳಿಗಳ ರಚನೆ, ಮಿನಿ ವಿಧಾನಸೌಧಗಳ ಕಲ್ಪನೆ ಇವರದ್ದೆ. ಸಹಕಾರ ಸಚಿವರಾಗಿ ಪರಿಶಿಷ್ಟರಿಗೆ ಮೀಸಲಾತಿ ತಂದರು. ಕೈಗಾರಿಕಾ ಸಚಿವರಾಗಿ ಎಸ್​ಸಿ-ಎಸ್​ಟಿ ಸಬ್ಸಿಡಿ ಶೇ.20ರಿಂದ 40ಕ್ಕೆ ಏರಿಕೆ. ಪೊಲೀಸ್ ಇಲಾಖೆಯ ಆಧುನೀಕರಣ, ಇಡೀ ದೇಶದಲ್ಲಿಯೇ ಮೊದಲ ಸೈಬರ್ ಪೊಲೀಸ್ ಠಾಣೆಯ ಸ್ಥಾಪನೆ ಮಾಡಿದರು. ಕೇಂದ್ರದಲ್ಲಿ ಕಾರ್ವಿುಕ ಸಚಿವರಾಗಿ ದುಡಿಯುವ ವರ್ಗಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ, ಪಿಂಚಣಿ, ಪಿಎಫ್ ಕಚೇರಿಗಳ ಕಂಪ್ಯೂಟರೀಕರಣ, ಕಲಬುರಗಿಯಲ್ಲಿ ಇಎಸ್​ಐ ಮೆಡಿಕಲ್ ಕಾಲೇಜು, ಆಸ್ಪತ್ರೆ, ಇಡೀ ದೇಶದ ಇಎಸ್​ಐ ಆಸ್ಪತ್ರೆಗಳ ನವೀಕರಣ ಹೀಗೆ ಸಾಧನೆಗಳ ಪಟ್ಟಿ ಸಾಗುತ್ತದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪಕ್ಷವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ. ಖರ್ಗೆ ಅವರ ಬದ್ಧತೆ ಮತ್ತು ಅನುಭವವು ಪಕ್ಷಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ. | ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಿರಿಯ ರಾಜಕೀಯ ಮುತ್ಸದ್ದಿ, ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಹೊತ್ತಿರುವ ತಮಗೆ ರಾಷ್ಟ್ರ ರಾಜಕಾರಣದ ಅಪಾರ ಅನುಭವ ಬಲ ನೀಡಲೆಂದು ಶುಭ ಹಾರೈಕೆಗಳು. | ಅಶ್ವತ್ಥನಾರಾಯಣ ಐಟಿ-ಬಿಟಿ ಸಚಿವ ಎಐಸಿಸಿ ಅಧ್ಯಕ್ಷರಾಗಿ ನೂತನ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃತ್ಪೂರ್ವಕ ಶುಭಾಶಯಗಳು. ತಮ್ಮ ನೇತೃತ್ವದಲ್ಲಿ ಕಾಂಗ್ರೆಸ್ ರಚನಾತ್ಮಕ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ. | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ

ದಲಿತರಿದ್ದರೂ ಜನಸಾಮಾನ್ಯರ ಧ್ವನಿ: ಮಲ್ಲಿಕಾರ್ಜುನ ಖರ್ಗೆ ದಲಿತ ಸಮಾಜದವರು. ಆದರೆ ಎಂದಿಗೂ ಯಾವೊಂದು ಜಾತಿಗೆ ಸೀಮಿತರಾಗಿ ರಾಜಕೀಯ ಮಾಡಿಲ್ಲ. ಸದಾ ಜನಸಾಮಾನ್ಯರ ಪರ ಧ್ವನಿ ಎತ್ತಿದವರು. ದಲಿತರು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಬಗ್ಗೆ ಅನೇಕ ಬಾರಿ ಚರ್ಚೆ ಎದ್ದು, ತಣ್ಣಗಾದವು. ಆದರೆ ಯಾವತ್ತೂ ಖರ್ಗೆ ಇದರ ಬಗ್ಗೆ ಚಕಾರ ಎತ್ತಿದವರಲ್ಲ. ಸಿಎಂ ಕುರ್ಚಿ( ಈ ಸ್ಥಾನಕ್ಕೆ ಅರ್ಹರಿದ್ದರೂ) ಸಿಕ್ಕಿಲ್ಲ ಎಂದು ಯಾವತ್ತೂ ಅತೃಪ್ತಿ ವ್ಯಕ್ತಪಡಿಸಿದವರಲ್ಲ. ಹೀಗಾಗಿ ಇವರ ನಡೆ ಭಿನ್ನ ಎನಿಸಿದೆ. ತಾವು ದಲಿತರೆನ್ನುವ ಬದಲಾಗಿ ಜನಸಾಮಾನ್ಯರ ಚಿಂತಕ ಎಂದೇ ನಿರೂಪಿಸಿಕೊಳ್ಳುವಲ್ಲಿ ಖರ್ಗೆ ಯಶಸ್ವಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net