ನಂಜನಗೂಡು: ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಕೃಷಿ ಜಿಯೋ ಪ್ಯಾಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ಸೋಮವಾರ ಕಾರ್ಮಿಕನ ತಲೆಗೆ ಯಂತ್ರ ತಗುಲಿ ಮೃತಪಟ್ಟಿದ್ದಾನೆ.
ಮಹಾರಾಷ್ಟ್ರ ಮೂಲದ ಆಶೀಸ್ ಸುಖದಾಸ್ ಪಾಟ್ಲೆ (24) ಮೃತ ಕಾರ್ಮಿಕ. ಈತ ಕಳೆದ ನಾಲ್ಕು ವರ್ಷಗಳಿಂದ ಕಾರ್ಖಾನೆಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಸೋಮವಾರ ಯಂತ್ರಕ್ಕೆ ದಾರ ಹಾಕುತ್ತಿದ್ದ ವೇಳೆ ಕಾರ್ಮಿಕನ ತಲೆಗೆ ಮಷಿನ್ ಬಲವಾಗಿ ತಾಕಿದೆ. ಪರಿಣಾಮ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಕಾರ್ಮಿಕ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.