

ಕೋಲಾರ/ಟೇಕಲ್: ಕಲ್ಲು ಬಂಡೆಗಳು ಬಿದ್ದು ಕಾರ್ಮಿಕ ಮೃತಪಟ್ಟಿರುವ ಪ್ರಕರಣ ಮಾಸುವ ಮುನ್ನವೇ ಶನಿವಾರ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಶುಕ್ರವಾರ ಕ್ರಷರ್ ಯಂತ್ರದ ಬೆಲ್ಟ್ಗೆ ಸಿಲುಕಿ ಕಾರ್ಮಿಕ ಮೃತಪಟ್ಟಿದ್ದಾನೆ.
ಜಿಲ್ಲೆಯ ಮಾಲೂರು ತಾಲೂಕಿನ ಮಿಟಗಾನಹಳ್ಳಿ ಸಮೀಪದ ಕ್ಷೇತ್ರನಹಳ್ಳಿ ಕ್ರಷರ್ ಒಂದರಲ್ಲಿ ಕೆಲಸಮಾಡುತ್ತಿದ್ದ ಬಿಹಾರ ಮೂಲದ ರೂಪೇಶ್ (30) ಮೃತ.
ರೂಪೇಶ್ ಕ್ರಷರ್ ಯಂತ್ರದ ಬೆಲ್ಟ್ಗೆ ಸಿಲುಕಿ ಮೃತಪಟ್ಟಿದ್ದರೂ ಘಟನೆಯನ್ನು ವಾಹನ ಅಪಘಾತ ಎಂಬಂತೆ ಬಿಂಬಿಸಲು ಪ್ರಯತ್ನ ನಡೆದಿದೆ ಎಂದು ಇತರ ಕಾರ್ಮಿಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಮಾಸ್ತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.