

ಆನೇಕಲ್: ಕಟ್ಟಡ ನಿರ್ಮಾಣ ವೇಳೆ ಇಟ್ಟಿಗೆಯೊಂದು ತಲೆ ಮೇಲೇ ಬಿದ್ದ ಪರಿಣಾಮವಾಗಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ನಲ್ಲಿ ಈ ಪ್ರಕರಣ ನಡೆದಿದೆ.
ಜಾರ್ಖಂಡ್ ಮೂಲದ ಪಂಕಜ್ ಕುಮಾರ್ ಯಾದವ್ (35) ಸಾವಿಗೀಡಾದ ಕಾರ್ಮಿಕ. ಈತ ಚಂದಾಪುರ ಮುಖ್ಯರಸ್ತೆ ಮರಸೂರು ಗೇಟ್ ಕಟ್ಟಡ ನಿರ್ಮಾಣದಲ್ಲಿ ನಿರತನಾಗಿದ್ದಾಗ ಈ ಅವಘಡ ಸಂಭವಿಸಿದೆ.
ಸಿಪಾನಿ ರಾಯಲ್ ಹೆರಿಟೇಜ್ ಅಪಾರ್ಟ್ಮೆಂಟ್ ಬಳಿ ಈ ದುರಂತ ಸಂಭವಿಸಿದೆ. ಕಟ್ಟಡ ನಿರ್ಮಾಣ ಸಲುವಾಗಿ ಕ್ರೇನ್ ಮೂಲಕ ಆರನೇ ಅಂತಸ್ತಿಗೆ ಸಾಮಗ್ರಿ ಸಾಗಿಸಲಾಗುತ್ತಿತ್ತು. ಆದರೆ ಈ ಸಂದರ್ಭ ಕ್ರೇನ್ ತಂತಿ ತುಂಡಾಗಿದ್ದು, ಇಟ್ಟಿಗೆಯೊಂದು ಕೆಳಗಿದ್ದ ಕಾರ್ಮಿಕನ ತಲೆ ಮೇಲೆ ಬಿದ್ದಿದೆ. ತಲೆಗೆ ಗಂಭೀರ ಗಾಯವಾಗಿ ಆತ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.