

ಶಿಕಾರಿಪುರ: ಪ್ರಬುದ್ಧರು, ಸಾಮಾಜಿಕ ಕಳಕಳಿ ಉಳ್ಳವರು, ಸಮಾಜಮುಖಿ ಕಾರ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡವರನ್ನು ಆಯ್ಕೆ ಮಾಡುವುದು ನಿಮ್ಮ ಆದ್ಯತೆಯಾಗಿರಲಿ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ಶಿಕಾರಿಪುರದ ಮಂಗಳ ಭವನದಲ್ಲಿ ಬಿಜೆಪಿ ಶಿಕಾರಿಪುರ ಮಂಡಲ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಮೇಲ್ಮನೆ ಎಂದರೆ ಅದಕ್ಕೆ ತನ್ನದೇ ಆದ ಘನತೆ, ಗೌರವವಿದೆ. ಅದನ್ನು ಕಾಪಾಡಿಕೊಂಡು ಸದನದ ಗೌರವವನ್ನು ಇನ್ನಷ್ಟು ಹೆಚ್ಚಿಸುವ ನಾಯಕರ ಅಗತ್ಯವಿದೆ. ಸಹೃದಯರು ಮತ್ತು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಆರಿಸಲು ನಿಮ್ಮ ಶ್ರಮದ ಅಗತ್ಯವಿದೆ. ಈ ದಿಸೆಯಲ್ಲಿ ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಎಸ್.ಎಲ್‌ಬೋಜೇಗೌಡ ಸೂಕ್ತ ಅಭ್ಯರ್ಥಿಗಳಾಗಿದ್ದು, ಅವರ ಆಯ್ಕೆ ನಿಮ್ಮ ಆದ್ಯತೆಯಾಗಲಿ ಎಂದರು.
ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಮ್ಮ ಗುರಿಯಾಗಬೇಕು. ಉತ್ತಮ ಅಭ್ಯರ್ಥಿಯನ್ನು ಪರಿಷತ್‌ಗೆ ಆರಿಸಿ ತರಲು ನೀವು ವಿದ್ಯಾವಂತರಲ್ಲಿ ಮನವಿ ಮಾಡಬೇಕು. ಸಂಘಟನಾತ್ಮಕ ಪ್ರಯತ್ನದಿಂದ ಯಶಸ್ಸು ಸಾಧ್ಯ. ನಮ್ಮ ಸಂಘಟನೆ ಶಕ್ತಿಯುತವಾಗಿದೆ. ಸಂಘಟನೆಗೆ ಇನ್ನಷ್ಟು ಬಲ ಬರಲು ಕಾರ್ಯಕರ್ತರ ಪರಿಶ್ರಮದ ಅಗತ್ಯವಿದೆ. ಸಾಮಾನ್ಯ ಕಾರ್ಯಕರ್ತನೂ ಪಕ್ಷದ ಆಸ್ತಿ. ಪ್ರಜ್ಞಾವಂತರ ಈ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ನಿಟ್ಟಿನಲ್ಲಿ ನಿಮ್ಮ ನಿರಂತರ ಪ್ರಯತ್ನ ಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಂಡು ಪ್ರಚಾರ ನಡೆಸಬೇಕು. ಈಗಾಗಲೇ ನೋಂದಣಿ ಮಾಡಿಕೊಂಡಿರುವ ಪದವೀಧರರನ್ನು ಹಾಗೂ ಶಿಕ್ಷಕರನ್ನು ಪಕ್ಷದ ಕಾರ್ಯಕರ್ತರು ಖುದ್ದು ಭೇಟಿ ಮಾಡಿ ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹರಿಕೃಷ್ಣ , ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಕೊಳಗಿ ರೇವಣಪ್ಪ, ವೀರೇಂದ್ರ ಪಾಟೀಲ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ಬಿ.ಡಿ.ಭೂಕಾಂತ್, ಟಿ.ಎಸ್.ಮೋಹನ, ಸಣ್ಣಹನುಮಂತಪ್ಪ, ಮಹೇಶ್ ಇತರರಿದ್ದರು.