

ನವದೆಹಲಿ: ಕರೊನಾ ಲಾಕ್ಡೌನ್ ಘೋಷಣೆ ಆಗುವ ತನಕವೂ ವರ್ಕ್ ಫ್ರಂ ಹೋಮ್ ಸಂಸ್ಕೃತಿ ಕೇವಲ ಕಾರ್ಪೊರೇಟ್ ಕ್ಷೇತ್ರದಲ್ಲಷ್ಟೇ ಇತ್ತು. ಆದರೆ, ಇದೀಗ ಸರ್ಕಾರವೂ ಅದನ್ನು ಸಹಜವಾಗಿ ಸ್ವೀಕರಿಸಿದ್ದು, ಈ ಸಂಬಂಧ ಕರಡು ಮಾರ್ಗಸೂಚಿಯನ್ನೂ ಪ್ರಕಟಿಸಿ ಗಮನಸೆಳೆದಿದೆ. ಲಾಕ್ಡೌನ್ ಅವಧಿಯಲ್ಲಿ ಅಧಿಕಾರಿಗಳಿಗೂ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅನುವೂ ಮಾಡಿಕೊಟ್ಟಿತ್ತು. ಈಗ ಅದನ್ನು ಲಾಕ್ಡೌನ್ ಮುಗಿದ ನಂತರವೂ ಅಗತ್ಯ ಇದ್ದಾಗ ಬಳಸುವಂತೆ ನಿಯಮ ಪರಿಷ್ಕರಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ.
ಕರಡು ನಿಯಮ ಪ್ರಕಾರ, ಡಿಪಾರ್ಟ್ಮೆಂಟ್ ಆಫ್ ಪರ್ಸೋನೆಲ್ ಆ್ಯಂಡ್ ಟ್ರೇನಿಂಗ್ (ಡಿಒಪಿಟಿ) ಅರ್ಹ ಅಧಿಕಾರಿ/ಸಿಬ್ಬಂದಿಗೆ ವರ್ಷ ಒಂದರ ಅವಧಿಯಲ್ಲಿ 15 ದಿನ ವರ್ಕ್ ಫ್ರಂ ಹೋಮ್ ನೀಡುವ ಆಯ್ಕೆಯನ್ನು ಒದಗಿಸುವ ಸಾಧ್ಯತೆಗಳು ದಟ್ಟವಾಗಿದೆ. ದೇಶದಲ್ಲಿ ಒಟ್ಟು 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ.
ಎಲ್ಲ ಇಲಾಖೆಗಳಿಗೂ ಕಳುಹಿಸಿರುವ ಸುತ್ತೋಲೆಯಲ್ಲಿ ಸಿಬ್ಬಂದಿ ಸಚಿವಾಲಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಅನೇಕ ಕಚೇರಿಗಳಲ್ಲಿ ವರ್ಕ್ ಫ್ರಂ ಹೋಮ್ ಸೌಲಭ್ಯ ಒದಗಿಸುವ ಸನ್ನಿವೇಶವನ್ನು ಕೋವಿಡ್ 19 ಸೃಷ್ಟಿ ಮಾಡಿತು.ಲಾಕ್ಡೌನ್ ಅವಧಿಯಲ್ಲಿ ಇ-ಆಫೀಸ್, ವಿಡಿಯೋ ಕಾನ್ಫರೆನ್ಸ್ ಸೌಲಭ್ಯಗಳನ್ನೂ ಬಳಸಿಕೊಳ್ಳಲಾಗಿದೆ. ಭಾರತ ಸರ್ಕಾರದ ಮಟ್ಟದಲ್ಲಿ ಇಂತಹ ಅನುಭವ ಇದೇ ಮೊದಲನೆಯದು.ಸದ್ಯೋಭವಿಷ್ಯದಲ್ಲಿ ಇದು ಇನ್ನಷ್ಟು ಅಗತ್ಯವಾಗಿರಲಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಲಿದೆ. ಈ ಸಂಬಂಧ ವಿಸ್ತೃತ ನಿಯಮದ ಅವಶ್ಯಕತೆ ಇದ್ದು, ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಅರ್ಹರಿಗೆ ಒದಗಿಸುವ ಕುರಿತು ಚಿಂತನೆ ನಡೆದಿದೆ ಎಂದು ಹೇಳಿದೆ.
ಇದಕ್ಕೆ ಪೂರಕವಾಗಿ, ಸರ್ಕಾರದ ಕೆಲಸ ಯಾವುದೇ ಅಡಚಣೆ ಇಲ್ಲದೆ ಮುಂದುವರಿಯುವುದಕ್ಕೆ ಬೇಕಾದ ಹೊಸ ಸಾಮಾನ್ಯ ಕಾರ್ಯಾಚರಣೆ ಪ್ರಕ್ರಿಯೆಗಳು ಅಂತಿಮಗೊಳ್ಳುತ್ತಿದ್ದು,ಶೀಘ್ರವೇ ಅವುಗಳು ಚಾಲ್ತಿಗೆ ಬರಲಿವೆ. ಆಯಾ ಸಚಿವಾಲಯಗಳು ತಮ್ಮ ಉದ್ಯೋಗಿಗಳಿಗೆ ಇದಕ್ಕೆ ಸಂಬಂಧಿಸಿದ ಮೂಲಸೌಕರ್ಯವನ್ನು ಒದಗಿಸಲಿವೆ. ಇಂಟರ್ನೆಟ್ ಸೇವೆಗೆ ವ್ಯಯಿಸಿದ ಹಣವನ್ನೂ ಉದ್ಯೋಗಿಗಳಿಗೆ ಮರುಪಾವತಿಸುವ ಚಿಂತನೆಯೂ ಇದೆ. ಪ್ರಸ್ತುತ 75 ಸಚಿವಾಲಯಗಳು/ಇಲಾಖೆಗಳು ಇ-ಆಫೀಸ್ ವೇದಿಕೆಯನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿವೆ.ಈ ಪೈಕಿ ಶೇಕಡ 80 ರಷ್ಟು ಕಚೇರಿ ಕೆಲಸ ಕಂಪ್ಯೂಟರ್ಗಳ ಮೂಲಕವೇ ಆಗುತ್ತಿದೆ.ಕೆಲವೊಂದು ರಹಸ್ಯ ಕಡತಗಳ ವಿಲೇವಾರಿಯನ್ನು ಮನೆಯಲ್ಲಿ ಕುಳಿತು ಮಾಡಲಾಗದು. ಹೀಗಾಗಿ ಕಚೇರಿಗೆ ಬರುವುದು ಅನಿವಾರ್ಯ ಎಂದು ಕರಡು ನಿಯಮ ಹೇಳಿದೆ. (ಏಜೆನ್ಸೀಸ್)