Russian oil ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ; ಈ ರೀತಿಯ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ ಎಂದ ಪುಟಿನ್

Vladimir Putin 31
Published on

Moscow: ರಷ್ಯಾದ ತೈಲ(Russian oil) ಕಂಪನಿಗಳ ಮೇಲಿನ ಅಮೆರಿಕದ ನಿರ್ಬಂಧಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕಾ ಮತ್ತು ಇತರ ಯಾವುದೇ ರಾಷ್ಟ್ರದ ಒತ್ತಡಕ್ಕೆ ನಾವು ಮಣಿಯುವುದಿಲ್ಲ ಎಂದಿದ್ದಾರೆ.

ರಷ್ಯಾದ ಪ್ರದೇಶದೊಳಗೆ ನಡೆಯುವ ಯಾವುದೇ ದಾಳಿಗಳು ಅತ್ಯಂತ ಗಂಭೀರ ಪ್ರತಿಕ್ರಿಯೆಯನ್ನು ಎದುರಿಸಬೇಕಾಗುತ್ತದೆ, ಅಮೆರಿಕದ ನಿರ್ಬಂಧಗಳನ್ನು ರಷ್ಯಾ-ಅಮೆರಿಕನ್ ಸಂಬಂಧಗಳನ್ನು ಬಲಪಡಿಸಲಾಗದ ಪ್ರತಿಕೂಲ ಕೃತ್ಯ ಎಂದು ಕರೆದರು ಎಂದು ರಾಯಿಟರ್ಸ್ ವರದಿ ಮಾಡಿದೆ.

ರಷ್ಯಾದ ಇಂಧನ ವಲಯವು ವಿಶ್ವಾಸದಿಂದ ಉಳಿದುಕೊಂಡಿದೆ, ನಿರ್ಬಂಧ ಎನ್ನುವುದು ನಮ್ಮ ದೇಶದ ಮೇಲೆ ಒತ್ತಡ ಹೇರುವ ತಂತ್ರವಾಗಿದ್ದು, ಯಾವುದೇ ಸ್ವಾಭಿಮಾನಿ ದೇಶ ಮತ್ತು ಅಲ್ಲಿನ ಸ್ವಾಭಿಮಾನಿ ಜನರು ಒತ್ತಡದಲ್ಲಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಎಂದರು. ಜಾಗತಿಕ ಇಂಧನ ಸಮತೋಲನವನ್ನು ಅಸ್ತವ್ಯಸ್ತಗೊಳಿಸುವುದರಿಂದ ಬೆಲೆಗಳು ಹೆಚ್ಚಾಗಬಹುದು ಎಂದರು. 3,000 ಕಿ.ಮೀ.ವರೆಗಿನ ದೇಶೀಯ ಕ್ಷಿಪಣಿಗಳನ್ನು ಒಳಗೊಂಡಂತೆ ಅಮೆರಿಕದಿಂದ ಸ್ವಾಧೀನಪಡಿಸಿಕೊಂಡ ದೀರ್ಘ ವ್ಯಾಪ್ತಿಯ ಟೊಮಾಹಾಕ್ ಕ್ಷಿಪಣಿಗಳನ್ನು ಉಕ್ರೇನ್ ಬಳಸಬಹುದು ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಪುಟಿನ್​, ಇದು ಉದ್ವಿಗ್ನತೆಯ ಪ್ರಯತ್ನ. ಅಂತಹ ಶಸ್ತ್ರಾಸ್ತ್ರಗಳನ್ನು ರಷ್ಯಾದ ಪ್ರದೇಶದ ಮೇಲೆ ದಾಳಿ ಮಾಡಲು ಬಳಸಿದರೆ, ಪ್ರತಿಕ್ರಿಯೆ ತುಂಬಾ ಗಂಭೀರವಾಗಿರುತ್ತದೆ, ಅವರು ಅದರ ಕುರಿತಾಗಿ ಯೋಚಿಸಲಿ ಎಂದರು.

ಉಕ್ರೇನ್‌ನಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಮಾಸ್ಕೋದ ಯುದ್ಧ ನಿಧಿಯನ್ನು ತಡೆಯಲು ಅಮೆರಿಕವು ಬುಧವಾರ ರಷ್ಯಾದ ಎರಡು ದೊಡ್ಡ ತೈಲ ಸಂಸ್ಥೆಗಳಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್ ವಿರುದ್ಧ ನಿರ್ಬಂಧಗಳನ್ನು ವಿಧಿಸಿದ ನಂತರ ಪುಟಿನ್​ರಿಂದ ಈ ಹೇಳಿಕೆಗಳು ಹೊರಬಿದ್ದಿವೆ. ಡೊನಾಲ್ಡ್ ಟ್ರಂಪ್ ಮತ್ತು ಪುಟಿನ್ ನಡುವಿನ ಎರಡನೇ ಶೃಂಗಸಭೆಯ ಯೋಜನೆಗಳನ್ನು ವಾಷಿಂಗ್ಟನ್ ವಿಳಂಬಗೊಳಿಸಿದ ಒಂದು ದಿನದ ಬಳಿಕ, ರಷ್ಯಾ ದೊಡ್ಡ ಪ್ರಮಾಣದ ಪರಮಾಣು ತರಬೇತಿ ಕವಾಯತುಗಳನ್ನು ನಡೆಸಿದ ನಂತರ ಟ್ರಂಪ್ ಸರ್ಕಾರ ನಿಬಂಧ ಹೇರಿದೆ.

ಅಮೆರಿಕದ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಘೋಷಿಸಿದ ಹೊಸ ನಿರ್ಬಂಧಗಳು ಎರಡೂ ಕಂಪನಿಗಳು ಮತ್ತು ಅವುಗಳ ಹಲವಾರು ಅಂಗಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡಿವೆ. ರಷ್ಯಾದ ಆರ್ಥಿಕ ನೆರವನ್ನು ಕಡಿತಗೊಳಿಸುವ ಮೂಲಕ ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಒತ್ತಡ ತಂತ್ರಗಳು ಮತ್ತು ಕ್ರಮಗಳ ನಡುವೆ, ಅಮೆರಿಕ ಅಧ್ಯಕ್ಷ ಟ್ರಂಪ್ ರಷ್ಯಾದ ಕಚ್ಚಾ ತೈಲದ ಅತಿದೊಡ್ಡ ಆಮದುದಾರರಾದ ಚೀನಾ ಮತ್ತು ಭಾರತದಂತಹ ದೇಶಗಳನ್ನು ಗುರಿಯಾಗಿಸಿಕೊಂಡು ದಂಡ ರೂಪದ ಸುಂಕ ದಾಳಿ ನಡೆಸಿದೆ.

ಅಮೆರಿಕಕ್ಕೆ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಈಗಾಗಲೇ ಇರುವ ಶೇ.155 ರಷ್ಟು ಸುಂಕಗಳ ಜೊತೆಗೆ, ಹೆಚ್ಚುವರಿಯಾಗಿ ಶೇ.100 ರಷ್ಟು ಸುಂಕವನ್ನು ಟ್ರಂಪ್ ಘೋಷಿಸಿದ್ದಾರೆ . ಟ್ರಂಪ್ ಸುಂಕಗಳಿಂದ ಭಾರತವೂ ತೊಂದರೆಗೊಳಗಾಗಿದ್ದು, ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕವನ್ನು ಖಡಿತಗೊಳಿಸುವ ಸಾಧ್ಯತೆ ಇದೆ. ಏಷ್ಯಾದ ಎರಡೂ ಪ್ರಮುಖ ಆರ್ಥಿಕತೆಗಳ ಮೇಲೆ ಟ್ರಂಪ್ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿದ್ದಾರೆ. ಚೀನಾ ಪ್ರತೀಕಾರವಾಗಿ ಇದೇ ರೀತಿಯ ಕ್ರಮಗಳ ಬಗ್ಗೆ ಎಚ್ಚರಿಸಿದ್ದರೂ, ಭಾರತವು ತನ್ನ ಜನರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ರಷ್ಯಾದ ತೈಲ ಆಮದನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net