

ಸಾಗರ: ಮುಂದಿನ ವಿಧಾನಸಭಾ ಚುನಾವಣೆಗೆ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಮೀಸಲಾತಿ ಘೋಷಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಸೋಮವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಸಾಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಸ್ವಾತಂತ್ರೃ ಬಂದಾಗಿನಿಂದ ಈತನಕ ಪುರುಷ ಮೀಸಲಾತಿಯೇ ಬರುತ್ತಿದೆ. ಮಹಿಳೆಯರ ಸಂಖ್ಯೆ ಹೆಚ್ಚಿದ್ದರೂ ಮಹಿಳಾ ಮೀಸಲಾತಿ ಘೋಷಿಸುವಲ್ಲಿ ಚುನಾವಣಾ ಆಯೋಗ ಗಮನಹರಿಸಿಲ್ಲ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ದೂರಿದರು.
ಕೆಳದಿ ರಾಣಿ ಚನ್ನಮ್ಮಾಜಿ ಆಳ್ವಿಕೆಗೆ ಒಳಪಟ್ಟ ನಗರಗಳಲ್ಲಿ ಸಾಗರವೂ ಒಂದು. ಹಾಗೆಯೇ ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಾಗರದಲ್ಲಿ ಸಾಕಷ್ಟು ಮಹಿಳೆಯರು ಹೆಸರು ಮಾಡಿದ್ದಾರೆ. ಅವರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವುದು ಆಯೋಗದ ಕರ್ತವ್ಯವೂ ಹೌದು. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಸಾಗರ ಕ್ಷೇತ್ರವನ್ನು ಮಹಿಳಾ ಮೀಸಲು ಕ್ಷೇತ್ರವಾಗಿ ಘೋಷಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಜಯಲಕ್ಷ್ಮೀ ನೇದರವಳ್ಳಿ ಮಾತನಾಡಿ, ಕೆಳದಿ ರಾಣಿ ಚನ್ನಮ್ಮಾಜಿ ಆಳ್ವಿಕೆ ನಡೆಸಿದ ವೀರಭೂಮಿ ಸಾಗರ. ಇಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ಸಿಗುವುದು ಅಗತ್ಯ. ಮತದಾರರ ಪಟ್ಟಿಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಮಹಿಳೆಯರ ಬಗ್ಗೆ ತಾರತಮ್ಯ ನೀತಿ ಅನುಸರಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಮೇಶ್ ಐಗಿನಬೈಲು, ಬೇಬಿ ಸಿರಿವಂತೆ, ರಾಜು ತೊರಗೋಡು, ದೇವು ಆಲಳ್ಳಿ, ರವೀಂದ್ರ ಕಾನ್ಲೆ, ದಿನೇಶ್ ಇತರರಿದ್ದರು.