

ಶಿಕಾರಿಪುರ: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು ಪುರುಷರಿಗೆ ಸಮನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಶುಭಾ ಮರವಂತೆ ಹೇಳಿದರು.
ಸೋಮವಾರ ಚನ್ನಕೇಶವ ನಗರದ ಶ್ರೀ ವಿಶ್ವಕರ್ಮ ಸಭಾಭವನದಲ್ಲಿ ಸುಗಂಧ ಬಳಗ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅಂಗನವಾಡಿಯಿಂದ ಬಾಹ್ಯಾಕಾಶದವರೆಗೆ ಎಲ್ಲ ಕ್ಷೇತ್ರದಲ್ಲೂ ಮಹಿಳೆ ತನ್ನ ಛಾಪು ಮೂಡಿಸಿದ್ದಾಳೆ. ಸಾಧನೆಗೆ ಮತ್ತೊಂದು ಹೆಸರೇ ಮಹಿಳೆ ಎಂದರು.
ಅನೇಕ ಪ್ರತಿಭಾನ್ವಿತ ಮಹಿಳೆಯರಿಗೆ ಪ್ರತಿಭೆ ಅನಾವರಣಕ್ಕೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಮಹಿಳೆಯರ ಯಶಸ್ಸಿನ ಗುಟ್ಟೆಂದರೆ ಪ್ರತಿಯೊಂದು ಕೆಲಸವನ್ನು ಶಿಸ್ತುಬದ್ಧವಾಗಿ ಮಾಡುತ್ತಾರೆ ಎಂದು ಬಣ್ಣಿಸಿದರು.
ಸುಗಂಧ ಬಳಗದ ಅಧ್ಯಕ್ಷ ಎಂ.ಜಿ.ಪ್ರಕಾಶ್ ಮಾತನಾಡಿ, ಸುಗಂಧ ಬಳಗ ಮಹಿಳಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸುತ್ತಿದೆ. ಈ ಬಾರಿ ಕಲ್ಯಾಣಿ ಭಜನಾ ಮಂಡಳಿ ಸೇರಿದಂತೆ ಹಲವು ಭಜನಾ ಮಂಡಳಿಗಳ ಗಾಯಕಿಯರಿಗೆ ಗೌರವಿಸುತ್ತಿದ್ದೇವೆ. ಹಿಂದೆ ಪೌರಕಾರ್ಮಿಕ ಮಹಿಳೆಯರು, ಮಹಿಳಾ ಪೊಲೀಸ್, ಅಧಿಕಾರಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಮಹಿಳೆಯರನ್ನು ಗೌರವಿಸಲಾಗಿದೆ ಎಂದರು.
ಪ್ರಮುಖರಾದ ಮಂಗಳಾ ಪ್ರಕಾಶ್, ವನಜಾಕ್ಷಿ ನಾಗರಾಜ್, ಗಿರಿಜಮ್ಮ ಪೃಥ್ವಿಕುಮಾರ್, ಜಯಮ್ಮ ಸಣ್ಣಗೌಡ, ಬಳಗದ ಗೌರವಾಧ್ಯಕ್ಷ ರವೀಂದ್ರ, ಪುರಸಭೆ ಸದಸ್ಯ ಪಾಲಾಕ್ಷಪ್ಪ, ಶಿವಕುಮಾರ್, ರುದ್ರಯ್ಯ, ಚನ್ನಬಸವಸ್ವಾಮಿ, ಕುಬೇರಪ್ಪ, ಪರಮೇಶ್ವರಪ್ಪ ಇತರರಿದ್ದರು.