

ಮಾಗಡಿ : ಕೃಷಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿಜ್ಞಾನಿ ಸವಿತಾ ಎಸ್. ಮಂಗಾನವರ ಹೇಳಿದರು. ತಾಲೂಕಿನ ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಸೋಮವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರಿಗೆ ಭಾರತ ದೇಶದಲ್ಲಿ ವಿಶೇಷ ಸ್ಥಾನಮಾನವಿದೆ. ಮಹಿಳೆ ಎಲ್ಲಾ ರಂಗಗಳಲ್ಲಿ ಸೇವೆಸಲ್ಲಿಸುತ್ತಾ ಇತರರಿಗೆ ಮಾದರಿ ಯಾಗಿದ್ದಾಳೆ. ಮಹಿಳೆಯರು ಆರೋಗ್ಯದ ಕಡೆ ಗಮನ ನೀಡಬೇಕು ಎಂದರು.
ಕೃಷಿ ವಿವಿ ತೋಟಗಾರಿಕಾ ವಿಭಾಗದ ಪ್ರಾಧ್ಯಾಪಕ ಕೆ.ಎನ್. ಶ್ರೀನಿವಾಸಪ್ಪ ಮಾತನಾಡಿ, ಮಹಿಳೆಯರು ಕೃಷಿಯಲ್ಲಿ ಮುಂದಾಳತ್ವವಹಿಸಿ ಸದೃಢರಾಗಿ ಮುನ್ನಡೆ ಸಾಧಿಸಬೇಕು ಎಂದು ಕರೆ ನೀಡಿದರು.
ಧಾನ್ ಫೌಂಡೇಶನ್, ವಲಯ ಸಂಯೋಜಕಿ ನಾಗರತ್ನ ಮಾತನಾಡಿ, ಮಹಿಳೆಯರು ಎಲ್ಲಾ ರಂಗದಲ್ಲಿ ಮುಂಚೂಣಿಯಲ್ಲಿದ್ದು, ಆತ್ಮಸ್ಥೈರ್ಯ ದಿಂದ ಕಾರ್ಯಪ್ರವೃತ್ತರಾಗಬೇಕು. ಎಂದರು.
ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಕೃಷಿಯಲ್ಲಿ ಸಾಧನೆಗೈದ ಮೈಲನಹಳ್ಳಿಯ ನಾಗರತ್ನ ಅವರನ್ನು ಸನ್ಮಾನಿಸಲಾಯಿತು. ಕೇಂದ್ರದ ವಿಜ್ಞಾನಿ ಲತಾ ಆರ್. ಕುಲಕರ್ಣಿ, ದಿನೇಶ್, ಪ್ರೀತು, ಶಾಂತ, ಚೈತ್ರಶ್ರೀ, ಕೃಷಿ ವಿಶ್ವವಿದ್ಯಾನಿಲಯ ತೋಟಗಾರಿಕಾ ವಿಭಾಗದ ಪ್ರಾಧ್ಯಾಪಕ ಕೆ.ಎನ್.ಶ್ರೀನಿವಾಸಪ್ಪ ಮತ್ತು 80 ಕ್ಕೂ ಅಧಿಕ ರೈತ ಮಹಿಳೆಯರು ಭಾಗವಹಿಸಿದ್ದರು.