ಕೆಲಸಕ್ಕೆ ಹೋಗಿ ಬರುತ್ತಿದ್ದ ನಾಲ್ವರು ಮಹಿಳೆಯರು ನಾಪತ್ತೆ!

Women
Published on

ಕೊಪ್ಪಳ: ಕೆಲಸಕ್ಕೆಂದು ತೆರಳಿದ್ದ ನಾಲ್ವರು ಮಹಿಳೆಯರು ಮರಳುವಾಗ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಯುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಗಿರಿಜಾ ಮಾಲಿಪಾಟೀಲ್ (32), ಭುವನೇಶ್ವರಿ ಪೊಲೀಸ್ ಪಾಟೀಲ್ (40), ಪವಿತ್ರಾ ಪೊಲೀಸ್ ಪಾಟೀಲ್ (45), ವೀಣಾ ಮಾಲಿಪಾಟೀಲ್ (19) ಕಾಣೆಯಾದ ಮಹಿಳೆಯರು. ಕೊಪ್ಪಳದ ಸಂಕನೂರು ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ಇವರು ಹಳ್ಳಕ್ಕೆ ಇಳಿದಿದ್ದೇ ಈ ದುರಂತಕ್ಕೆ ಕಾರಣ. ನೀರಿನ ರಭಸ ಲೆಕ್ಕಿಸದೆ ದಾಟಲು ಯತ್ನಿಸಿದ ಇವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹಳ್ಳದಲ್ಲಿ ಇಳಿಯುತ್ತಲೇ ಪವಿತ್ರಾ ಮತ್ತು ವೀಣಾ ಕೊಚ್ಚಿಕೊಂಡು ಹೋಗಿದ್ದಾರೆ. ಅವರನ್ನು ರಕ್ಷಿಸಲು ಧಾವಿಸಿದ ಗಿರಿಜಾ ಮತ್ತು ಭುವನೇಶ್ವರಿ ಕೂಡ ನೀರುಪಾಲಾಗಿದ್ದಾರೆ.

ಕೆಲಹೊತ್ತು ಹಳ್ಳದಲ್ಲಿನ ಗಿಡ ಹಿಡಿದುಕೊಂಡಿದ್ದ ಗಿರಿಜಾ-ಭುವನೇಶ್ವರಿ, ಗ್ರಾಮಸ್ಥರು ರಕ್ಷಿಸಲು ಮುಂದಾಗುವಷ್ಟರಲ್ಲಿ ಅವರೂ ಕೊಚ್ಚಿಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಹುಡುಕಾಟ ನಡೆಯುತ್ತಿದೆ. ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net