ಮಹಿಳೆಯರು ನಿರಂತರವಾಗಿ ದಿನಪತ್ರಿಕೆ ಓದಲಿ

Oplus_131072
ಯಳಂದೂರು ಪಟ್ಟಣದ ಸೊಸೈಟಿ ಬೀದಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಗುರುವಾರ ವಿಜಯವಾಣಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಲಕ್ಕಿ ಡಿಪ್ ಕಾರ್ಯಕ್ರಮದ ಐವರು ಅದೃಷ್ಟಶಾಲಿಗಳನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಲಾಯಿತು.
Published on

ಯಳಂದೂರು: ಮಹಿಳೆಯರು ಇಡೀ ಸಂಸಾರವನ್ನು ಸುಲಭವಾಗಿ ನಿಭಾಯಿಸಬಲ್ಲ ದೈವಿಕ ಶಕ್ತಿಯನ್ನು ಹೊಂದಿದ್ದಾರೆ. ಇವರು ಕಲಿತರೆ ಶಾಲೆ ತೆರೆದಂತೆ ಎಂಬ ನಾಣ್ಣುಡಿ ಇದಕ್ಕೆ ಶಕ್ತಿಯಾಗಿ ನಿಲ್ಲುತ್ತದೆ. ದಿನಪತ್ರಿಕೆಗಳನ್ನು ನಿತ್ಯ ಓದುವುದರಿಂದ ಇವರು ಇನ್ನಷ್ಟು ವಿಚಾರವನ್ನು ತಿಳಿದುಕೊಂಡು ತಮ್ಮ ಮಕ್ಕಳಿಗೆ ಇದನ್ನೂ ಕೂಡ ಧಾರೆ ಎರೆಯಬಹುದು ಎಂದು ಸಾಂತ್ವನ ಮಹಿಳಾ ಕೇಂದ್ರದ ಸಮಾಜ ಸೇವಕಿ ಕವಿತಾ ಸಲಹೆ ನೀಡಿದರು.

ಪಟ್ಟಣದ ಸೊಸೈಟಿ ಬೀದಿಯಲ್ಲಿರುವ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಹಮ್ಮಿಕೊಂಡಿದ್ದ ನಾರಿ ನಿನಗೊಂದು ಸ್ಯಾರಿ ಅಭಿಯಾನದಲ್ಲಿ ಭಾಗವಹಿಸಿದ್ದ ಓದುಗ ವಿಜೇತರನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಮಾತನಾಡಿದರು.

ವಿಜಯವಾಣಿ ದಿನಪತ್ರಿಕೆಯು ಮಹಿಳಾ ಓದುಗರನ್ನು ಉತ್ತೇಜಿಸುವ ನಿಟ್ಟಿನಲ್ಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಇದರಿಂದ ಪತ್ರಿಕೆ ಓದುವ ಮಹಿಳೆಯರ ಸಂಖ್ಯೆಯೂ ವೃದ್ಧಿಸುತ್ತದೆ. ಪ್ರತಿ ಮನೆಯಲ್ಲೂ ಮಹಿಳೆಯರು ದಿನಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜ್ಞಾನಾರ್ಜನೆ ಹೆಚ್ಚಾಗುತ್ತದೆ. ಈಗ ಮೊಬೈಲ್‌ನಲ್ಲಿ ಎಲ್ಲ ಮಾಹಿತಿ ಇದ್ದರೂ ಪತ್ರಿಕೆ ಓದುವಾಗ ಮನಸ್ಸಿಗೆ ಇದು ನಾಟುತ್ತದೆ. ಇದರಲ್ಲಿನ ವಸ್ತು ವಿಷಯಗಳ ಸಮಗ್ರ ಚಿತ್ರಣ ಇರುತ್ತದೆ. ಇದನ್ನು ಮನದಲ್ಲಿಟ್ಟುಕೊಳ್ಳಲು ಸುಲಭವಾಗುತ್ತದೆ. ಅಲ್ಲದೆ ನಿಖರ ಮಾಹಿತಿಗಳು ಮಾತ್ರ ಇಲ್ಲಿರುವುದರಿಂದ ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮೂಲವಾಗಿವೆ. ಹಾಗಾಗಿ ಪ್ರತಿಯೊಬ್ಬರೂ ಪತ್ರಿಕೆಗಳನ್ನು ಕೊಂಡು ಓದಬೇಕು. ವಿಜಯವಾಣಿ ದಿನಪತ್ರಿಕೆಯು ಇಂತಹ ವೇದಿಕೆಯನ್ನು ಕೇವಲ ಮಹಿಳಾ ಓದುಗರಿಗೆ ಸೃಷ್ಟಿ ಮಾಡಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ ಎಂದರು.

ಮುಖಂಡ ಯರಗಂಬಳ್ಳಿ ರಂಗಸ್ವಾಮಿ ಮಾತನಾಡಿ, ಮಹಿಳೆಯರು, ವಿದ್ಯಾರ್ಥಿಗಳನ್ನು ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತದೆ. ಇದರೊಂದಿಗೆ ಈ ಪತ್ರಿಕೆಯು ಸಮಾಜಪರ ಅನೇಕ ಕೆಲಸಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಈ ಸ್ಪರ್ಧೆಯ ಮೂಲಕ ಗ್ರಾಮೀಣ ಮಹಿಳಾ ಓದುಗರನ್ನು ಉತ್ತೇಜಿಸುವ ಕೆಲಸ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದರು.

ಸಮಾಜ ಸೇವಕಿ ಶಿವಮ್ಮ, ಸೌಂದರ್ಯಾ, ನಂದಕುಮಾರಿ ಸೇರಿದಂತೆ ಅನೇಕರು ಇದ್ದರು.

ವಿಜೇತರು: ಲಾಟರಿ ಮೂಲಕ ಕೆ.ಎನ್.ರಾಜೇಶ್ವರಿ, ಕಿನಕಹಳ್ಳಿ, ವಿ.ಶೀಲಾ ವೈ.ಕೆ.ಮೋಳೆ, ಸಿ ಸೌಮ್ಯಾ ದುಗ್ಗಹಟ್ಟಿ, ಎಂ.ಶಕುಂತಲಾ ಅಗರ, ಜಬೀನ್ ತಾಜ್, ಯಳಂದೂರು ಪಟ್ಟಣ ವಿಜೇತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net