ಮಹಿಳೆಯರು ಸಾಧನೆಯ ಶಿಖರವನ್ನೇರಬೇಕು

womens day
ಕುವೆಂಪು ರಂಗಮಂದಿರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಎಂಎಲ್‌ಸಿ ಬಲ್ಕಿಷ್ ಬಾನು ಉದ್ಘಾಟಿಸಿದರು. ಶುಭಾ ಮರವಂತೆ, ಎಚ್.ಎಸ್.ಸುಂದರೇಶ್, ಸಿ.ಎಸ್.ಚಂದ್ರಭೂಪಾಲ್, ಡಾ. ಕೆ.ಎಸ್.ನಟರಾಜ್, ಬಿ.ಎಚ್.ಕೃಷ್ಣಪ್ಪ, ಶಶಿರೇಖಾ, ಡಾ. ಎಚ್. ಸಂತೋಷ್‌ಕುಮಾರ್, ರೇಖಾ ಇದ್ದರು.
Published on

ಶಿವಮೊಗ್ಗ: ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸುವ ಮೂಲಕ ತಮ್ಮ ಅಸ್ತಿತ್ವ ಉಳಿಸಿಕೊಂಡು ಸಾಧನೆಯ ಶಿಖರವನ್ನೇರಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಇತಿಹಾಸದಲ್ಲಿ ಮಹತ್ವವಾದ ಸ್ಥಾನ ಇದೆ. ಶತಮಾನಗಳಿಂದ ಸಾಕಷ್ಟು ಸಮಸ್ಯೆಗಳ ವಿರುದ್ಧ ಸಂಘಟನೆ ಕಟ್ಟಿಕೊಂಡು ಹೋರಾಡುತ್ತಾ ಬಂದಿದ್ದಾರೆ. ಆದರಿಂದ ಬಹಳಷ್ಟು ಸವಾಲು ಎದುರಿಸಿದ್ದಾರೆ. ಅದರ ಜತೆ ಜತೆಗೆ ಕುಟುಂಬದ ನಿರ್ವಹಣೆಯನ್ನೂ ಕೂಡ ಮಾಡುತ್ತಾ ಬಂದಿರುವ ಅವರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು ಎಂದರು.

ಮಹಿಳೆಯರಿಗೆ ಶಿಕ್ಷಣವನ್ನೇ ನೀಡದ ಸಂದರ್ಭದಲ್ಲಿ ಸಾವಿತ್ರ ಬಾ ಫುಲೆ ಅವರು ಎಲ್ಲ ಕಟ್ಟಳೆಗಳನ್ನು ಮೀರಿ ಶಿಕ್ಷಣ ಪಡೆದರು. ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣ, ಮತದಾನ ಹಕ್ಕನ್ನು ಕೊಡಿಸುವ ಮೂಲಕ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಸಬಲರನ್ನಾಗಿ ಮಾಡಿದರು. ಹಾಗಾಗಿ ನಾವೆಲ್ಲ ಅವರ ದಾರಿಯಲ್ಲಿ ಸಾಗಬೇಕಿದೆ ಎಂದರು.

ಎಂಎಲ್‌ಸಿ ಬಲ್ಕೀಶ್ ಬಾನು ಮಾತನಾಡಿ, ನಾವೆಲ್ಲ ನಮ್ಮ ಹಕ್ಕು, ನಮ್ಮ ತನವನ್ನು ಉಳಿಸಿಕೊಳ್ಳುವ ಜತೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ದೌರ್ಜನ್ಯಗಳಂತಹ ಕೃತ್ಯಗಳ ಬಗ್ಗೆ ಚಿಂತನೆ ಮಾಡಬೇಕಿದೆ. ನಾವು ಹೆಣ್ಣು ನಮ್ಮಿಂದ ಏನನ್ನು ಮಾಡಲು ಆಗುವುದಿಲ್ಲವೆಂಬ ಆಲೋಚನೆ ಬಿಡಬೇಕು. ನಮಗೆ ನಾವೇ ಆತ್ಮಸ್ಥೈರ್ಯ ತುಂಬಿಕೊಳ್ಳಬೇಕು. ನಮಗೆ ಎಲ್ಲಿಯವರೆಗೆ ನಮ್ಮ ಮೇಲೆ ನಂಬಿಕೆ ಬರುವುದಿಲ್ಲವೋ ಅಲ್ಲಿಯವರೆಗೂ ನಮ್ಮನ್ನು ನಾವು ಕಾಪಾಡಿಕೊಳ್ಳಲು ಆಗುವುದಿಲ್ಲ ಎಂದರು.

ಕೇವಲ ಸಂಸ್ಕಾರ, ಸಂಸಾರ ನಡೆಸುವುದು ಮಾತ್ರ ಹೆಣ್ಣಿನ ಜವಾಬ್ದಾರಿಯಲ್ಲ. ಈ ಸಮಾಜಕ್ಕೆ ಹೆಣ್ಣಿನ ಅವಶ್ಯಕತೆ ಇದೆ. ಆಕೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬೇಕು, ಸಾಧನೆ ಮಾಡಬೇಕು. ನಾನಿಲ್ಲದಿದ್ದರೆ ಈ ಸಮಾಜವಿಲ್ಲ ಎಂಬ ತೀರ್ಮಾನ ಮಾಡಬೇಕು. ಈಗಿನ ಸರ್ಕಾರ ಮಹಿಳೆಯ ಸಬಲೀಕರಣದ ದೃಷ್ಟಿಯಿಂದಲೇ ಗ್ಯಾರಂಟಿ ಯೋಜನೆ ಕೊಟ್ಟಿದೆಯೋ ಹೊರತು ಯಾವುದೇ ರಾಜಕೀಯವಾಗಿ ಅಲ್ಲ. ಹೆಣ್ಣು ಸಾಮಾಜಿಕವಾಗಿ ಹೂಡಿಕೆ ಮಾಡಿದರೆ ಮಾತ್ರ ಸಮಾಜದ ಮುಖ್ಯಭೂಮಿಕೆಗೆ ಬರಲು ಸಾಧ್ಯ ಎಂದರು.

ಕುವೆಂಪು ವಿವಿಯ ಎನ್‌ಎಸ್‌ಎಸ್‌ನ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಉಪನ್ಯಾಸ ನೀಡಿದರು. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಡಿಎಚ್‌ಓ ಡಾ. ಕೆ.ಎಸ್.ನಟರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಎಚ್.ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ನಿರೂಪಣಾಧಿಕಾರಿ ಡಾ. ಎಚ್.ಸಂತೋಷ್‌ಕುಮಾರ್, ಬಾಲನ್ಯಾಯ ಮಂಡಳಿ ರೇಖಾ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net